ಕಾರವಾರ: ಪಿಎಸ್‌ಐ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ರಾಮನಗರ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ.

ರಾಮನಗರ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆಗೆ ಯತ್ನಿಸಿದವರು. ಜೂಜಾಟ ಆರೋಪದಡಿ ಭಾಸ್ಕರ್‌ ವಿರುದ್ಧ ರಾಮನಗರ ಪಿಎಸ್‌ಐ ಬಸವರಾಜ್ ಮಗನೂರು ಪ್ರಕರಣ ದಾಖಲಿಸಿದ್ದರು. ನಿನ್ನೆ ಗುರುವಾರ ಜಮೀನು ವಿಚಾರಕ್ಕೆ ಭಾಸ್ಕರ್‌ ಮದ್ಯ ಸೇವಿಸಿ ಬೈಕ್‌ ಮೂಲಕ ಠಾಣೆಗೆ ತೆರಳಿದ್ದಾನೆ.

ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್‌ಐ ಬಸವರಾಜ್‌ ಸೂಚಿಸಿದ್ದಾರೆ. ಇಷ್ಟಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್‌ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.