ಬೆಂಗಳೂರು: ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಅತ್ಯಂತ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಕೋಣಗಳಿಗೆ ಹಿಂಸಾತ್ಮಕವಾಗಿ ಹೊಡೆಯಲಾಗುತ್ತದೆ ಎಂದು ಈ ಹಿಂದೆ ಪೇಟಾ ನ್ಯಾಯಾಲಯದ ಮೊರೆ ಹೋಗಿ ಮುಖಭಂಗ ಅನುಭವಿಸಿತ್ತು. ಆ ಸಂದರ್ಭದಲ್ಲಿ ಕಂಬಳಪ್ರಿಯರು ನ್ಯಾಯಕ್ಕಾಗಿ ಮೊರೆ ಹೋಗಿ ನ್ಯಾಯಾಲಯದಿಂದ ಕಂಬಳ ನಡೆಸಲು ಹಸಿರು ನಿಶಾನೆ ಪಡೆದುಕೊಂಡಿದ್ದರು. ಆದರೆ, ಇದೀಗ ಮತ್ತೆ ಪೇಟಾ ಸಂಸ್ಥೆ ಬೆಂಗಳೂರು ಕಂಬಳ ಆಯೋಜನೆ ಕುರಿತು ತಕರಾರು ತೆಗೆದಿದೆ.
ಕಂಬಳಕ್ಕೆ 700 ವರ್ಷಗಳ ಇತಿಹಾಸವಿದೆ. ಎಲ್ಲಾ ಹಿನ್ನೆಲೆ ಮತ್ತು ಜಾತಿಯ ಜನರು ಇದರಲ್ಲಿ ಭಾಗವಹಿಸುತ್ತಾರೆ. ಕಂಬಳ ವಾಣಿಜ್ಯ ಜನಾಂಗವಲ್ಲ; ಇದು ಗೌರವ ಮತ್ತು ಪ್ರತಿಷ್ಠೆಗಾಗಿ ನಡೆಯುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಕಂಬಳ ಕಳೆದ ವರ್ಷ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಸಂಭ್ರಮದಿಂದ ನಡೆದಿತ್ತು. ಸುಮಾರು 200 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸಿ ಐತಿಹಾಸಿಕ ದಾಖಲೆಯನ್ನು ಮೆರೆದಿದ್ದವು. ಬೆಂಗಳೂರು ಕಂಬಳದಿಂದ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ದೇಶದ ವಿವಿಧ ರಾಜ್ಯಗಳ ಜನತೆ ಹತ್ತಿರದಿಂದಲೇ ಕಂಬಳ ನೋಡಿ ಪುಳಕಿತಗೊಂಡಿದ್ದರು. ಅತ್ಯಂತ ಸಂಭ್ರಮದಿಂದ ನಡೆದ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದು ಇತಿಹಾಸ. ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಳೆದ ವರ್ಷ ಆಯೋಜಿತಗೊಂಡಿದ್ದ ಕಂಬಳ ಕ್ರೀಡೆ ಬಗ್ಗೆ ಕಂಬಳಪ್ರಿಯರಿಂದ ಇನ್ನಿಲ್ಲದ ಪ್ರಶಂಸೆ ವ್ಯಕ್ತವಾಗಿತ್ತು. ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿ ಬಂದಿತ್ತು. ಆದರೆ ಈ ಬಾರಿ ಬೆಂಗಳೂರು ಕಂಬಳದ ವಿರುದ್ಧ ಪೆಟಾ ಸಂಸ್ಥೆ ತಗದೆ ತೆಗೆದಿದೆ. ಇದರ ವಿರುದ್ಧ ಕರಾವಳಿಯ ಕಂಬಳಪ್ರಿಯದ ಪ್ರಿಯರು ಮತ್ತೆ ಸಿಡಿದೇಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಪೆಟಾ ಸಂಸ್ಥೆ ಹೇಳುವಂತೆ ಕೋಣಗಳಿಗೆ ಯಾವ ವಿಧದಲ್ಲೂ ಹಿಂಸೆಯನ್ನು ನೀಡುವುದಿಲ್ಲ. ಸ್ವಂತ ಮಕ್ಕಳಂತೆ ಕೋಣಗಳನ್ನು ಆರೈಕೆ ಮಾಡಿ ಕಂಬಳಕ್ಕೆ ಸಜ್ಜುಗೊಳಿಸಲಾಗುತ್ತದೆ.
ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳ ಸ್ಪರ್ಧೆಯನ್ನು ನಿಲ್ಲಿಸುವಂತೆ ಪ್ರಾಣಿ ದಯಾ ಸಂಘ ‘ಪೆಟಾ’ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸೋಮವಾರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಕಂಬಳವನ್ನು ಇದೇ ತಿಂಗಳು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕೋಣಗಳನ್ನು ಕರೆತರಲಾಗುತ್ತದೆ. ಕಂಬಳ ಒಂದು ಪ್ರಾಣಿ ಹಿಂಸಾ ಕೃತ್ಯವಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.
ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜಿಸಲಾಗಿದೆ ಎನ್ನುತ್ತಿದ್ದೀರಿ. ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಮುಂದೆ ಬಂದಿರುವುದೇಕೆ?’ ಎಂದು ಪೀಠ ಪ್ರಶ್ನಿಸಿದೆ.
‘ಈ ಸಂಬಂಧ ಜುಲೈನಲ್ಲಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಇನ್ನೂ ವಿಚಾರಣೆಗೆ ನಿಗದಿಪಡಿಸಲಾಗಿಲ್ಲ. ಇದೀಗ ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜನೆಯಾಗಿದ್ದು, ತುರ್ತು ವಿಚಾರಣೆಗೆ ಪರಿಗಣಿಸಬೇಕಿದೆ’ ಎಂದು ವಕೀಲರು ತಿಳಿಸಿದರು.
ವಾದ ಆಲಿಸಿದ ಪೀಠ ವಿಚಾರಣೆಯನ್ನು ನಾಳೆಗೆ ಮೂಂದೂಡಿದೆ.ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಎತ್ತಿನಗಾಡಿ ಓಟ ಮತ್ತು ಕರ್ನಾಟಕದ ಕಂಬಳಕ್ಕೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಕಳೆದ ವರ್ಷದ ಮೇನಲ್ಲಿ ಎತ್ತಿಹಿಡಿದಿತ್ತು.