ಬೆಳಗಾವಿ ಸುವರ್ಣವಿಧಾನಸೌಧ : ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 2023ಕ್ಕೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ ವಿವಿಧ ಕಾರ್ಯಕ್ರಮಗಳು ನಡೆಯುತಿದ್ದು, ಅದರಂತೆ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಸಹ ಡಿಸೆಂಬರ್ 12 ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಭ್ರಮ-50ರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಸುವರ್ಣವಿಧಾನಸೌಧದಲ್ಲಿ ಡಿಸೆಂಬರ್ 8ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದ್ದು ಕಾರ್ಯಕ್ರಮದ ಸಿದ್ಧತೆಯು ಭರ್ಜರಿಯಾಗಿ ನಡೆದಿದೆ. ಅಂದು 1 ಗಂಟೆ ವೇದಿಕೆ ಕಾರ್ಯಕ್ರಮ ಮತ್ತು 2 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಅಂದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಎಲ್ಲ ಗಣ್ಯರು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ವಿಧಾನ ಮಂಡಲದ ಹಿಂದಿನ ಎಲ್ಲ ವಿಧಾನಸಭೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತನ ಸಭಾಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ನಾಡಿನಾದ್ಯಂತ ಹೆಸರು ಮಾಡಿದ, ಮೂಡುಬಿದಿರೆಯಲ್ಲಿ ಪ್ರತಿ ಬಾರಿ ನಡೆಯುವ ಆಳ್ವಾಸ ವಿರಾಸತ್ ಮತ್ತು ಆಳ್ವಾಸ ನುಡಿಸಿರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡಿಸೆಂಬರ್ 12 ರಂದು ಸುವರ್ಣ ವಿಧಾನಸೌಧದ ಅಂಗಳದಲ್ಲಿ ಆಯೋಜಿಸಿ ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷಿಣ ಕರ್ನಾಟಕ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆ ಸೇರಿದಂತೆ ಈ ಭಾಗದ ಎಲ್ಲಾ ಜಿಲ್ಲೆಗಳ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ವಿದ್ಯಾರ್ಥಿ ಯುವಜನರು, ಮಹಿಳೆಯರು, ಮಕ್ಕಳು, ನೌಕರರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುವರ್ಣ ವಿಧಾನಸೌಧವು ಉತ್ತರ ಕರ್ನಾಟಕ ಭಾಗದ ಜನರ ಸ್ವಾಭಿಮಾನದ ಸಂಕೇತವಾಗಿದೆ. ಈ ಸೌಧದ ನಿರ್ಮಾಣದಿಂದ ಈ ಭಾಗದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆಕಿದೆ. ಈ ಭಾಗದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿದೆ. ಸಾರ್ವಜನಿಕರ ಒತ್ತಾಸೆಯಂತೆ ಸುವರ್ಣ ವಿಧಾನಸೌಧದ ಪೂರ್ಣ ಬೆಳಕೆಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೊಸ ಪರಂಪರೆ:

ವಾಡಿಕೆಯಂತೆ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಭಾರಿಯ ಅಧಿವೇಶನದ ವಿಶೇಷತೆಯಾಗಿ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದ್ದೇವೆ. ಅಧಿವೇಶನ ಸಂದರ್ಭದಲ್ಲಿ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮ ರೂಪಿಸುತ್ತಿರುವುದು ಹೊಸ ಪರಂಪರೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದೆ ವೇಳೆ ತಿಳಿಸಿದರು.

ನಾಡುನುಡಿಯ ಅಭಿಮಾನದ ಈ ಕಾರ್ಯಕ್ರಮಕ್ಕೆ ಸರ್ವ ಶಾಸಕರಿಗೂ ಆಹ್ವಾನ ನೀಡಿದ್ದೇವೆ. ಎಲ್ಲ ಗಣ್ಯಮಾನ್ಯರಿಗೂ ಸರ್ವ ಜನರಿಗೂ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಅಂದು ನಡೆಯುವ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಜನ ಕಲಾವಿದರು ಭಾಗಿಯಾಗಲಿದ್ದು ಉತ್ತರ ಕರ್ನಾಟಕ ಭಾಗದ ಜನರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಅಧಿವೇಶನದಲ್ಲಿ ಹೋರಾಟಗಳ ಸಂಖ್ಯೆ ಕಡಿಮೆಯಾಗಿದೆ. ಡಿಸೆಂಬರ್ 4ರಿಂದ ನಡೆದ ಕಲಾಪಗಳಲ್ಲಿ ವಿವಿಧ ವಿಷಯಗಳ ಮೇಲೆ ಆರೋಗ್ಯಕರ ಚರ್ಚೆಯಾಗಿದೆ ಎಂದು ಹೊರಟ್ಟಿ ಅವರು ತಿಳಿಸಿದರು.