ಚಾಮರಾಜನಗರ: ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದವುಗಳಿಗೆ ಶುಭಾಶಯ ಕೋರುವುದು ಸರ್ವೇ ಸಾಮಾನ್ಯ. ಆದರೆ, ನಿನ್ನೆಯಿಂದ ಆರಂಭವಾಗಿರುವ ಪಿಯುಸಿ ಪರೀಕ್ಷೆಗೆ ಶುಭ ಕೋರಿ ವಿದ್ಯಾರ್ಥಿಗೆ ಜಯಶಾಲಿಯಾಗಿ ಬಾ ಎಂದು ಆತನಿಗೆ ಶುಭ ಕೋರಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಕನ್ನಡ ಪರೀಕ್ಷೆ ಬರೆಯಲು ಹೊರಟವನ ಕಾಲೆಳೆಯುವ ರೀತಿಯಲ್ಲಿ ಶುಭಾಶಯ ಕೋರುವ ಪ್ಲೆಕ್ಸ್ ನಗರದಲ್ಲಿ ಶುಕ್ರವಾರ ಕಂಡು ಬಂದಿತ್ತು. ಇದು ಎಲ್ಲರ ಗಮನ ಸೆಳೆಯಿತು.
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಪ್ಲೆಕ್ಸ್ ಅಳವಡಿಸಲಾಗಿತ್ತು. ಪರೀಕ್ಷೆ ಬರೆಯಲು ಹೊರಟ ಅಭ್ಯರ್ಥಿಯ ಸ್ನೇಹಿತರು ಪ್ಲೆಕ್ಸ್ ಅಳವಡಿಸಿದ್ದಾರೆ ಎನ್ನಲಾಗಿದೆ. ಸತತ 4 ನೇ ಬಾರಿ ಕನ್ನಡ ಪರೀಕ್ಷೆ ಬರೆಯುತ್ತಿರುವ ಶ್ರೀಯುತ ಜೀವನ ರವರಿಗೆ ಶುಭಾಶಯಗಳು ಎಂದು ಪ್ಲೆಕ್ಸ್‌ನಲ್ಲಿ ಬರೆಯಲಾಗಿದೆ. ಸ್ನೇಹಿತನ ಫೋಟೊ ಹಾಕಿ. ಇತ್ತೀಚೆಗೆ ಟ್ರೆಂಡ್ ಆಗಿರುವ ಬೆಳ್ಳುಳ್ಳಿ ಕಬಾಬ್ ಎಂಬ ಶೀರ್ಷಿಕೆ ನೀಡಲಾಗಿದೆ. ನಮ್ ಮನ್ಸು ನಮ್ಗೆ ಒಳ್ಳೆದ್ ಮಾಡಿದ್ರೆ, ದೇವ್ರು ಈ ಎಕ್ಸಾಮ್ ಎಲ್ಲಾ ಏನಿಕ್ಕೆಎಂಬ ಒಕ್ಕಣೆಯೂ ಪ್ಲೆಕ್ಸ್‌ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ಲೆಕ್ಸ್ ಫೋಟೊ ಹರಿದಾಡುತ್ತಿದೆ.