ದೆಹಲಿ: ಭಾರತದಲ್ಲಿನ ಧರ್ಮಾಧಾರಿತ ಜನಸಂಖ್ಯೆ ಕುರಿತು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ಇತ್ತೀಚೆಗೆ ನಡೆಸಿದ ಅಧ್ಯಯನದ ಅಂಕಿ ಅಂಶ ಬಹಿರಂಗಗೊಂಡಿದೆ. ಅದರ ಪ್ರಕಾರ, ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕಳೆದ 65 ವರ್ಷಗಳಲ್ಲಿ ಶೇ.7.8ರಷ್ಟು ಕುಸಿತವಾಗಿದೆ. ಜೈನ ಮತ್ತು ಪಾರ್ಸಿಗಳ ಸಂಖ್ಯೆಯಲ್ಲೂ ಕುಸಿತವಾಗಿದೆ.

ಮ್ಯಾನ್ಮಾರ್, ನೇಪಾಳದಲ್ಲೂ
ಕುಸಿತ:
ನೆರೆಯ ಮ್ಯಾನ್ಮಾರ್ ದೇಶದಲ್ಲಿಯೂ ಹಿಂದೂಗಳ ಜನಸಂಖ್ಯೆ 65 ವರ್ಷಗಳಲ್ಲಿ ಶೇ.10 ರಷ್ಟು ಕುಸಿದಿದೆ. ನೆರೆಹೊರೆ ರಾಷ್ಟ್ರದಲ್ಲಿ ಇದು 2ನೇ ಅತಿ ಗರಿಷ್ಠ ಕುಸಿತವಾಗಿದೆ. ನೇಪಾಳದ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಜನಸಂಖ್ಯೆ ಇದೇ ಅವಧಿಯಲ್ಲಿ ಶೇ.3.6ರಷ್ಟು ಕುಸಿತ ಕಂಡಿದೆ.

ವಿಶ್ವದ 167 ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ನೆರೆ ದೇಶಗಳಲ್ಲಿ ಮುಸ್ಲಿಂ ಸಮುದಾಯ ವೃದ್ಧಿ ಕಂಡಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರ ಸಂಖ್ಯೆ ಶೇ.18.5ರಷ್ಟು ಏರಿಕೆ ಕಂಡಿದ್ದರೆ, ಪಾಕಿಸ್ತಾನದಲ್ಲಿ ಶೇ.3.75 ಮತ್ತು ಅಫ್ಘಾನಿಸ್ತಾನದಲ್ಲಿ 0.29 ರಷ್ಟು ಹೆಚ್ಚಳವಾಗಿದೆ. ಇನ್ನೊಂದೆಡೆ, ಮ್ಯಾನ್ಮಾರ್‌ನಲ್ಲಿ ಥೇರವಾಡ ಬೌದ್ಧರ ಬಹುಪಾಲು ಜನಸಂಖ್ಯೆ 65 ವರ್ಷಗಳಲ್ಲಿ ಶೇ.10ರಷ್ಟು ಕುಸಿತ ಕಂಡಿದೆ. ಮಾಜೀವ್‌ನಲ್ಲಿ ಶಾಫಿ ಸುನ್ನಿ
ಜನಸಂಖ್ಯೆ ಶೇ.1.47ರಷ್ಟು ಕುಸಿದಿದೆ.

ಅಲ್ಪಸಂಖ್ಯಾತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. 1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.43.15 ರಷ್ಟು ಹೆಚ್ಚಳವಾಗಿದ್ದರೆ, ಸಮುದಾಯದ ಸಂಖ್ಯೆ ಶೇ.5.38ರಷ್ಟು, ಸಿಖ್ ಸಮುದಾಯ ದವರ ಸಂಖ್ಯೆ ಶೇ.6.58ರಷ್ಟು ಹೆಚ್ಚಳವಾಗಿದೆ. ಬೌದ್ಧರ ಜನಸಂಖ್ಯೆ ಸ್ವಲ್ಪವಷ್ಟೇ ಹೆಚ್ಚಳವಾಗಿದೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.

ನೆರೆ ದೇಶಗಳಾದ ಭೂತಾನ್ ಮತ್ತು ಶ್ರೀಲಂಕಾದಲ್ಲಿನ ಬೌದ್ಧ ಧರ್ಮೀಯರ ಜನಸಂಖ್ಯೆ ಕ್ರಮವಾಗಿ ಶೇ. 17.6 ಮತ್ತು ಶೇ. 5.25ರಷ್ಟು ಏರಿಕೆ ಕಂಡಿದೆ.