ಗದಗ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಾಲ್ವರು ಅಮಾಯಕರ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟಿದ್ದ ಹಿರಿಯ ಮಗ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಗದಗ ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಘಟನೆ ನಡೆದ 48 ಗಂಟೆಗಳ ಒಳಗಾಗಿಯೇ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ತಿಳಿಸಿದ್ದಾರೆ.
ದೂರುದಾರ ಪ್ರಕಾಶ ಬಾಕಳೆ ಅವರ ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಬಾಕಳೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಕೊಲೆ ಮಾಡಲು ಸುಪಾರಿ ಪಡೆದ ಗದಗ ರಾಜೀವಗಾಂಧಿ ನಗರ ನಿವಾಸಿ ಫಿರೋಜ್ ನಿಸಾರ ಅಹ್ಮದ್ ಖಾಜಿ(29), ಹುಡ್ಕೋ ನಿವಾಸಿ ಜಿಶಾನ್ ಮೆಹಬೂಬಅಲಿ ಖಾಜಿ(24) ಹಾಗೂ ಮಹಾರಾಷ್ಟ್ರದ ಮೀರಜ್ ನಿವಾಸಿಗಳಾದ ಸಾಹಿತ್ ಅಷ್ಪಾಕ್ ಖಾಜಿ(19), ಸೋಹೆಲ್ ಅಷ್ಪಾಕ್ ಖಾಜಿ(19), ಸುಲ್ತಾನ್ ಜಿಲಾನಿ ಖಾಜಿ(23), ಮಹೇಶ ಜಗನ್ನಾಥ ಸಾಳೋಂಕೆ (21), ವಾಹಿದ ಲಿಯಾಕತ್ ಬೇಪಾರಿ(21) ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಆಸ್ತಿ ವಿಚಾರವಾಗಿ ಜಗಳ :
ತಂದೆ ಪ್ರಕಾಶ ಬಾಕಳೆ ಹಾಗೂ ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಬಾಕಳೆ ಮಧ್ಯೆ ಆಸ್ತಿ ವಿಚಾರವಾಗಿ ಕೆಲ ತಿಂಗಳ ಹಿಂದೆ ಜಗಳ ನಡೆದಿತ್ತು. ತಂದೆಗೆ ಗೊತ್ತಿಲ್ಲದಂತೆ ವಿನಾಯಕ ಆಸ್ತಿಗಳನ್ನು ಮಾರಿದ್ದರಿಂದ ಪ್ರಕಾಶ ಬಾಕಳೆ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ವಿನಾಯಕ ಕೊಲೆಗೆ ಸುಪಾರಿ ನೀಡಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಐಜಿಪಿ ವಿಕಾಸಕುಮಾರ ಮಾಹಿತಿ ನೀಡಿದರು.
ಪ್ರಮುಖ ಆರೋಪಿ ವಿನಾಯಕ ಬಾಕಳೆ ಕಾರ್ ಮಾರಾಟ ಮಾಡುವ ಏಜೆಂಟ್ :
ಫಿರೋಜ್ ಹಾಗೂ ಜಿಶಾನ್ ಸಂಪರ್ಕಿಸಿ ಸುಪಾರಿ ಕೊಟ್ಟಿದ್ದಾನೆ. ಒಟ್ಟು 65 ಲಕ್ಷ ರೂಪಾಯಿಗೆ ಸುಪಾರಿ ಮಾತುಕತೆ ನಡೆದ ನಂತರ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದಾನೆ. ಸುಪಾರಿ ಪಡೆದ ಈ ಇಬ್ಬರು ಮೀರಜ್ ನಿಂದ ಬಾಡಿಗೆ ಹಂತಕರನ್ನು ಕರೆಯಿಸಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದಾರೆ. ಎಂಟು ಜನ ಆರೋಪಿಗಳು ಕಡಿಮೆ ಸಮಯದಲ್ಲಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ . ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಗದಗ ನಗರದಲ್ಲಿಯೇ ಬಂಧಿಸಲಾಗಿದೆ. ಇನ್ನುಳಿದ ಐವರನ್ನು ಮೀರಜ್ನಿಂದ ಬಂಧಿಸಿ ಕರೆತರಲಾಗಿದೆ ಎಂದು ತಿಳಿಸಿದರು.
ನಾಲ್ವರು ಅಮಾಯಕರ ಹತ್ಯೆ
ಘಟನೆ ದಿನ ಪ್ರಕಾಶ ಬಾಕಳೆ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಪ್ರಕಾಶ ಹಾಗೂ ಸುನಂದಾ ಎಂದು ಭಾವಿಸಿ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜೊತೆ ಇದ್ದ ಅಮಾಯಕ ಸಂಬಂಧಿಕರಾದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ(55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ(16) ಅವರನ್ನು ಹತ್ಯೆ ಮಾಡಿದ್ದಾರೆ.
ಅತ್ಯಂತ ಸಂಕೀರ್ಣವಾಗಿದ್ದ ಈ ಕೊಲೆ ಪ್ರಕರಣವನ್ನು ಗದಗ ಜಿಲ್ಲಾ ಪೊಲೀಸರು ಕೇವಲ 72 ಗಂಟೆಯಲ್ಲಿ ಯಶಸ್ವಿಯಾಗಿ ಬೇಧಿಸಿದ್ದಾರೆ. ಹೀಗಾಗಿ ಪೊಲೀಸರ ತಂಡಕ್ಕೆ ಡಿಜಿ ಅಲೋಕ ಮೋಹನ ಅವರು 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಆದಷ್ಟು ಬೇಗ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.