ದೆಹಲಿ:
ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿನ ಶ್ರೀಬಾಲರಾಮ ಪ್ರಾಣಪ್ರತಿಷ್ಠಾಪನೆಯ ಸಂಭ್ರಮ ದೇಶಾದ್ಯಂತ ಮನೆಮಾಡಿತ್ತು. ದೇಶದ ಹಳ್ಳಿಹಳ್ಳಿಗಳಲ್ಲೂ ರಾಮನಸ್ಮರಣೆ, ರಾಮಜಪ, ಜೈಶ್ರೀರಾಮ್ ಉದ್ಘೋಷಗಳು ಅನುರಣಿಸಿವೆ. ರಾಮಮಂದಿರ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ.
ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’. ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಸೌರಫಲಕಗಳನ್ನು ಅಳವಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಪಂಚದ ಎಲ್ಲಾ ಭಕ್ತರು ಸೂರ್ಯವಂಶಸ್ಥ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ. ಸೋಮವಾರ ಅಯೋಧ್ಯೆಯಲ್ಲಿ ಪ್ರಾಣ-ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಮ ಮಂದಿರ ಉದ್ಘಾಟನೆ ಬಳಿಕ ನಮ್ಮ ಸರ್ಕಾರವು ಒಂದು ಕೋಟಿ ಮನೆಗಳ ಮೇಲ್ಛಾವಣಿಗೆ ಸೋಲಾರ್ ಅಳವಡಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಅನ್ನು ಪ್ರಾರಂಭಿಸಲಿದೆ. ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.