ಹುಬ್ಬಳ್ಳಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾತ್ರ ಏನೂ ಇಲ್ಲ, ಅವರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಅವರು ಬಹಳ ಒಳ್ಳೆಯವರು. ಪಾಪದವರು. ಈ ಪ್ರಕರಣದಲ್ಲಿ ಅವರ ಪಾತ್ರವೇನೂ ಇಲ್ಲ. ವಿನಾಕಾರಣ ಪ್ರಹ್ಲಾದ ಜೋಶಿ ಹಾಗೂ ಅಮಿತ್ ಶಾ ಅವರ ಹೆಸರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ. ಎಂದು ತಿಳಿಸಿದ್ದಾರೆ.
ಗೋಪಾಲ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪಾತ್ರ ಏನೂ ಇಲ್ಲದಿದ್ದರೂ ವಿನಾಕಾರಣವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ದೇವಾನಂದ ಚವ್ಹಾಣ ಅವರ ಪಾತ್ರವೂ ಇಲ್ಲವೆಂದು ಹೇಳಿದರು.
25 ಲಕ್ಷ ರೂ. ಕೊಟ್ಟಿದ್ದೇನೆ
ಬಿಜೆಪಿ ಟಿಕೆಟ್‌ಗಾಗಿ ಗೋಪಾಲ ಜೋಶಿ ಅವರಿಗೆ ನಾನು ಎರಡು ಕೋಟಿ ರೂ.ಗಳನ್ನು ನೀಡಿಲ್ಲ. ಅವರಿಗೆ 25 ಲಕ್ಷ ರೂ.ಗಳನ್ನು ನೀಡಿದ್ದೆ. ಅದನ್ನು ನೇರವಾಗಿ ಅವರಿಗೇ ಕೊಟ್ಟಿದ್ದೆ ಎಂದು ಸ್ವತಃ ದೂರುದಾರರಾದ ಸುನೀತಾ ಚವ್ಹಾಣ ಅವರು ಸ್ಪಷ್ಟಪಡಿಸಿದರು.
ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದೂರು ಕೊಟ್ಟಿದ್ದೇನೆ. ಆದರೆ, ಇದರಲ್ಲಿ ಗೋಪಾಲ ಜೋಶಿ ಹೊರತಾಗಿ ಪ್ರಹ್ಲಾದ ಜೋಶಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಹೈಕಮಾಂಡ್ ಅನ್ನು ಇದಕ್ಕೆ ಎಳೆದು ತರಬೇಡಿ ಎಂದು ಹೇಳಿದರು.