
ವಾಷಿಂಗ್ಟನ್: ಭಾರತದ ಮತ್ತು ಅಮೆರಿಕ ನಡುವಿನ ಸುಂಕ ಮಾತುಕತೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ನ್ಯೂಜೆರ್ಸಿಯ ಅಟಾರ್ನಿ ಅಲೀನಾ ಹಬ್ಬಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರ ನಾಯಕತ್ವದ ಗುಣಗಳು ಶ್ಲಾಘನೀಯ. ಅವರು ತುಂಬಾ ಬುದ್ದಿವಂತ ವ್ಯಕ್ತಿ ಮತ್ತು ಉತ್ತಮ ಸ್ನೇಹಿತ’ ಎಂದು ಬಣ್ಣಿಸಿದ್ದಾರೆ.
‘ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದಿದ್ದರು. ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತೀಯರು ತುಂಬಾ ಬುದ್ಧಿವಂತರು. ಮೋದಿ ಮತ್ತು ನಾನು ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಇದರಿಂದ ಉಭಯ ದೇಶಗಳ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಭಾರತ ಒಬ್ಬ ಶ್ರೇಷ್ಠ ಪ್ರಧಾನಿಯನ್ನು ಪಡೆದಿದೆ ಎಂದರೆ ತಪ್ಪಲ್ಲ’ ಎಂದು ಟ್ರಂಪ್ ಕೊಂಡಾಡಿದ್ದಾರೆ.
‘ನಾವು ಶೀಘ್ರದಲ್ಲೇ ಪರಸ್ಪರ ಸುಂಕಗಳನ್ನು ವಿಧಿಸುತ್ತೇವೆ. ಭಾರತೀಯರು ನಮಗೆ ಶುಲ್ಕ ವಿಧಿಸುತ್ತಾರೆ… ನಾವು ಅವರಿಗೆ ಶುಲ್ಕ ವಿಧಿಸುತ್ತೇವೆ. ಭಾರತ ಅಥವಾ ಚೀನಾದಂತಹ ಯಾವುದೇ ಕಂಪನಿ ಅಥವಾ ದೇಶವು ಶುಲ್ಕ ವಿಧಿಸಿದರೂ ನಾವು ನ್ಯಾಯಯುತವಾಗಿರಲು ಬಯಸುತ್ತೇವೆ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.