ಬೆಳಗಾವಿ :
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ರಣತಂತ್ರ ಹೆಣೆಯುತ್ತಿದೆ. ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳನ್ನು ಈ ಬಾರಿ ಹೇಗಾದರೂ ಮಾಡಿ ಗೆದ್ದೆ ತೀರಬೇಕು ಎಂದು ಕಾಂಗ್ರೆಸ್ ಪಕ್ಷ ಇದೀಗ ರಣತಂತ್ರ ಹೆಣೆದಿದೆ.

ಈ ನಡುವೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮಹತ್ವದ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ.

ಚಿಕ್ಕೋಡಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಿದರೇ ಗೆಲ್ಲಿಸಿಕೊಂಡು ಬರುತ್ತೇವೆ.
2014 ರಲ್ಲಿ ಮಂತ್ರಿ ಆಗಿದ್ದರೂ ಮುಖ್ಯಮಂತ್ರಿಗಳ ಸೂಚನೆಯಂತೆ ಲೋಕಸಭೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಗಣೇಶ ಹುಕ್ಕೇರಿ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಪುತ್ರ ಗಣೇಶ ಶಾಸಕನಾಗಿ ಆಯ್ಕೆಯಾದರೂ ಮಂತ್ರಿ ಮಾಡಲಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನ ಕೇಳಿಲ್ಲ, ಕೇಳುವುದು ಇಲ್ಲ ಎಂದು ಹೇಳಿದರು.

ಈಗ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡ ಬರುತ್ತಿದೆ. ನಾನು ಸ್ಪರ್ಧಿಸಿದರೇ ಚಿಕ್ಕೋಡಿ ಕ್ಷೇತ್ರ ಗೆಲ್ಲುತ್ತೇವೆ ಅಂತ ಲೆಕ್ಕಾಚಾರವಿದೆ. ಆದರೆ ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಚಿಕ್ಕೋಡಿ ಲೋಕಸಭೆಯಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ. ಕುರುಬ ಸಮುದಾಯದ ಲಕ್ಷ್ಮಣ ರಾವ್ ಚಿಂಗಳೆಗೆ ಕೈ ಟಿಕೆಟ್ ಕೊಡಿ. ನಾವೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಎಂಎಲ್‌ಸಿ ಆಗಿಯೇ ಮುಂದುವರಿಯುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮುಖ್ಯಮಂತ್ರಿಗಳು, ಹೈಕಮಾಂಡ್ ಹೇಳಿದರೂ
ಮುಖ್ಯಮಂತ್ರಿಗಳು, ಹೈಕಮಾಂಡ್ ಹೇಳಿದರೂ ನಾನು ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಕಳೆದ ಕೆಲ ದಿನಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೆ ಪುತ್ರನ ಸ್ಪರ್ಧೆ ವಿಚಾರವಾಗಿ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಪುತ್ರನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿ ಮತ್ತು ಚಿಕ್ಕೋಡಿಯಿಂದ ಲಿಂಗಾಯತ ಮತ್ತು ಕುರುಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಆದರೂ ಕೆಲ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದು ಪ್ರಭಾವಿಗಳು ಮತ್ತು ಆರ್ಥಿಕ ಸಂಪನ್ಮೂಲ ಹೊಂದಿರುವವರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಕಾಂಗ್ರೆಸ್ ಸತೀಶ ಜಾರಕಿಹೊಳಿ ಅಥವಾ ಲಕ್ಷ್ಮಿ ಹೆಬ್ಬಾಳ್ಳರ್‌ ಅವರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ನಿರ್ಧರಿಸಬಹುದು ಎಂದು ಮೂಲಗಳು ತಿಳಿಸಿವೆ.

ಚಿಕ್ಕೋಡಿಯಲ್ಲಿ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಹಾಗೂ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬಹುತೇಕ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.