ಉಡುಪಿ : ಭಾಷಾ ಸಮರಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರವೇಶಿಸಿದ್ದು, ತಮ್ಮ ಪಕ್ಷದ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬ್ಯಾಟ್‌ ಬೀಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಭಾಷೆಯ ಬಗ್ಗೆ ಅಷ್ಟೊಂದು ಪ್ರೇಮ ಇದ್ದರೆ, ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲೂ ಹಿಂದಿ ಪಂಡಿತರನ್ನು ತಂದು ನಿಲ್ಲಿಸಲಿ ಎಂದು ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಕೋಟ ಶ್ರೀನಿವಾಸ್ ಪೂಜಾರಿಯವರು ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಮಂತ್ರಿಯಾಗುವ ತನಕ ಎಲ್ಲ ಹಂತಗಳಲ್ಲಿ ಜನಸೇವೆ ಮಾಡಿ ಅನುಭವ ಇರುವವರು. ಭಾಷೆ ಮುಖ್ಯ ಅಲ್ಲ, ಭಾಷೆಗಿಂತ ಮಾಡಿದ ಕೆಲಸ ಮುಖ್ಯ. ಈಗ ಉತ್ತರ ಪ್ರದೇಶದಿಂದ ಬಂದವರು ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಉಡುಪಿಯಿಂದ ಆಯ್ಕೆಯಾಗಿ ಹೋಗಿ ದೆಹಲಿಯಲ್ಲಿ ಕೆಲಸ ಮಾಡಲು ಕಷ್ಟ ಏನಿಲ್ಲ. ಕೆಲಸ ಮಾಡುವವರಿಗೆ ಭಾಷೆ ಮುಖ್ಯ ಅಂತ ಅನಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಲೋಕಸಭೆಯಲ್ಲಿ ಕೆಲಸ ಮಾಡಲು ಹಿಂದಿ ಅಥವಾ ಇಂಗ್ಲಿಷ್ ಭಾಷೆ ಮುಖ್ಯ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕ್ಷೇತ್ರದಲ್ಲಿ ಭಾಷಾ ವಾರ್‌ ನಡೆಯುತ್ತಿದ್ದು, ಸಂಸದರಾಗುವವರಿಗೆ ಹಿಂದಿ ಅಥವಾ ಇಂಗ್ಲಿಷ್ ಬರಬೇಕಲ್ಲವೇ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರೆ, ಸಂಸದರಾದ ಆರೇ ತಿಂಗಳಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದ್ದಾರೆ.