ಮೈಸೂರು : ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ಮೈಸೂರು ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೋಮವಾರ ತಡರಾತ್ರಿ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿ, ಕ್ಷೇತ್ರದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ. ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ ಎಂದು ಭಾವುಕರಾದರು.

ಸ್ವಾರ್ಥಕ್ಕಾಗಿ ಯಾರ ಮನೆ ಬಾಗಿಲನ್ನೂ ನಾನು ತಟ್ಟಿಲ್ಲ. ಟಿಕೆಟ್ ಸಿಗುತ್ತೋ, ಸಿಗಲ್ವೋ ಚಾಮುಂಡಿ ನಿರ್ಧರಿಸುತ್ತಾಳೆ. ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದ ಸಿಂಹ, 10 ವರ್ಷಗಳ ರಾಜಕಾರಣದ ಬಗ್ಗೆ ಸುದೀರ್ಘ ಮಾತುಗಳನ್ನಾಡಿದರು.

ಮಡಿಕೇರಿಯ ಜನರು ನೇರ ಹಾಗೂ ನಿಷ್ಠುರವಾದಿಗಳು. ಆದರೆ, ಮೈಸೂರು ಜನ ರಾಜಕಾರಣ‌ ಮಾಡುವವರು. ಮೈಸೂರಿನಲ್ಲಿರುವಷ್ಟು ರಾಜಕಾರಣ ಎಲ್ಲಿಯೂ ಇಲ್ಲ. ಜನರ ಮಧ್ಯೆ ಇರುವವರಿಗೆ ಪಕ್ಷ ಟಿಕೆಟ್ ನೀಡಬೇಕು. ನನ್ನಿಂದ ಯಾರು ಸಹ ಸೋತಿಲ್ಲ. ನನ್ನ ವಿರುದ್ಧ ಏಕೆ ಇಲ್ಲಸಲ್ಲದ ಆರೋಪ ಮಾಡುತ್ತೀರಿ? ನನ್ನ ಕ್ಷೇತ್ರದಾಚೆಗೂ ಜನ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಈಗಲೂ ಪಕ್ಷ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ. ಪ್ರಧಾನಿ ಮೋದಿ ಇರುವವರೆಗೂ ಇರುತ್ತೇನೆ ಎಂದು ಹೇಳಿದ್ದೆ. ನನ್ನಂಥ ವ್ಯಕ್ತಿಗೆ ಟಿಕೆಟ್ ಕೊಡಬೇಕೆಂದು ನಿರೀಕ್ಷಿಸಿದ್ದೆ. ಆದರೆ, ರಾಜಕಾರಣದಲ್ಲಿ ಏನಾದರೂ ಆಗಬಹುದು. ಮೋದಿಯಂಥ ಮೋದಿಯೇ ಗೌಣವಾಗಿದ್ದರು. ಸೂರ್ಯನಿಗೇ ಗ್ರಹಣ ಬಡಿಯುತ್ತದೆ, ಇನ್ನು ನಾನ್ಯಾರು? ನಾನು ಈಗ ಎಂಪಿ ಆಗಿದ್ದೀನಿ, ಎಂಪಿ ಆಗಿಯೇ ಸಾಯುವುದಿಲ್ಲ. ನನ್ನ ನಸೀಬು ಕೆಟ್ಟು ಏನು ಬೇಕಾದರೂ ಆಗಬಹುದು. 10 ವರ್ಷ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಪ್ರತಾಪ್ ಸಿಂಹ ಹೇಳಿದರು.

ಮುಡಾದಲ್ಲಿ ಬದಲಿ ಸೈಟ್ ಮಾಡಿದ್ದರೆ ಕೋಟ್ಯಂತರ ಹಣ ಮಾಡುತ್ತಿದ್ದೆ. ಆದರೆ ಮುಡಾದಲ್ಲಿ ಬದಲಿ ಸೈಟ್ ಮಾಡಿಕೊಂಡಿಲ್ಲ. ಗ್ಯಾಸ್ ಪೈಪ್​​ಲೈನ್ ವಿಚಾರದಲ್ಲಿ ರಾಜಕಾರಣ ಮಾಡಿದರು ಎಂದು ಪರೋಕ್ಷವಾಗಿ ಮಾಜಿ ಶಾಸಕ ನಾಗೇಂದ್ರ, ರಾಮದಾಸ್ ವಿರುದ್ಧ ಕಿಡಿ ಕಾರಿದರು. ಮಡಿಕೇರಿ ಜನರು ನೇರ, ನಿಷ್ಠುರವಾದಿಗಳು. ಆದರೆ ಮೈಸೂರು ಜಿಲ್ಲೆಯ ಜನರು ರಾಜಕಾರಣ‌ ಮಾಡುವವರು. ರಾಜರಾಗಿದ್ದ ಶ್ರೀಕಂಠದತ್ತ ಒಡೆಯರ್ ಅವರನ್ನೇ ಜನ ಸೋಲಿಸಿದರು ಎಂದು ಅವರು ಹೇಳಿದರು.

ಡಾ.ಮಹದೇವಪ್ಪ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಮೈಸೂರಿನಲ್ಲಿ ಯಾರಾದರೂ ಸೋತಿದ್ದರೆ ಅವರ ನಡತೆಗಳು ಕಾರಣ. ವಿಧಾನಸಭೆ ಚುನಾವಣೆಯಲ್ಲಿ ನನ್ನಿಂದ ಯಾರೂ ಕೂಡ ಸೋತಿಲ್ಲ. ನನ್ನ ಕ್ಷೇತ್ರದಾಚೆಗೂ ಕೂಡ ಜನರು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಈಗಲೂ ಕೂಡ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.