ಬೆಂಗಳೂರು/ನವದೆಹಲಿ : 2022 ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕರ್ನಾಟಕ ಸೇರಿದಂತೆ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಗುರುವಾರ ಬೆಳಿಗ್ಗೆ ಕರ್ನಾಟಕದ ಬೆಂಗಳೂರು ನಗರ, ಕೊಡಗು ಜಿಲ್ಲೆ, ಕೇರಳದ ಎರ್ನಾಕುಲಂ ಮತ್ತು ತಮಿಳುನಾಡಿನ ಚೆನ್ನೈ ಸೇರಿದಂತೆ 16 ಕಡೆ ದಾಳಿ ದಾಳಿ ನಡೆಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ ನೆಟ್ಟಾರು ಅವರನ್ನು ಜುಲೈ 2022 ರಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ದ್ವಿಚಕ್ರವಾಹನದಲ್ಲಿ ಬಂದು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯು ಸಮಾಜದ ಒಂದು ವರ್ಗದ ಜನರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿತ್ತು ಎಂದು ಎನ್‌ಐಎ (NIA) ತನಿಖೆಗಳಲ್ಲಿ ಕಂಡುಬಂದಿವೆ.
ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಎನ್‌ಐಎ ಈ ದಾಳಿ ನಡೆಸಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಒಂದು ಮನೆ ಹಾಗೂ ಬೆಳ್ತಂಗಡಿ, ಸುಳ್ಯ ಹಾಗೂ ಕೆಯ್ಯೂರು ಮೂಲದ ವ್ಯಕ್ತಿಗಳ ಮನೆಯಲ್ಲಿ ಎನ್ಐಎ ಶೋಧ ನಡೆಸಿದೆ. ಬೆಂಗಳೂರಿನಿಂದ ಆಗಮಿಸಿದ ಐವರು ಅಧಿಕಾರಿಗಳಿದ್ದ ಎನ್ಐಎ ತಂಡಕ್ಕೆ ಬೆಳ್ತಂಗಡಿ ಹಾಗೂ ಸುಳ್ಯ ಪೊಲೀಸರು ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ. ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದಡ್ಕಕ್ಕೆ ಆಗಮಿಸಿದ ಎನ್ಐಎ ತಂಡ ಆರೋಪಿಗಾಗಿ ಹುಡುಕಾಟ ನಡೆಸಿದೆ. ಬುಧವಾರ ಸಂಜೆ ಆಟೋ ರಿಕ್ಷಾದಲ್ಲಿ ಆರೋಪಿ ಬಂದು ಹೋಗಿದ್ದಾನೆ ಎಂಬ ಮಾಹಿತಿ ಆಧರಿಸಿ ಎನ್ಐಎ ಪರಿಶೀಲನೆ ನಡೆಸಿದೆ ಎನ್ನಲಾಗಿದೆ.
ಆಗಸ್ಟ್ 4, 2022 ರಂದು ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ, ಇದುವರೆಗೆ 19 ಜನರನ್ನು ಬಂಧಿಸಿದೆ ಮತ್ತು 21 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಪರಾರಿಯಾಗಿರುವ ಇತರರನ್ನು ಪತ್ತೆಹಚ್ಚಲು ಸಂಸ್ಥೆ ತನ್ನ ಶೋಧವನ್ನು ಮುಂದುವರೆಸಿದೆ.