ರಾಜಕೀಯ ಕ್ಷೇತ್ರ, ಅದರಲ್ಲೂ ಚುನಾವಣೆ ವಿಷಯದಲ್ಲಿ ಹೀಗೇ ಎಂದು ನಿಶ್ಚಿತವಾಗಿ ಹೇಳಲಾಗದು. ಅದು ಆಗಾಗ ಬದಲಾಗುತ್ತಿರುವಂತಹ ಒಂದು ಕ್ಷೇತ್ರ. ಸದ್ಯ ಮಹಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎಲ್ಲರೂ ಸಿದ್ಧರಾಗಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲಾಗುತ್ತಿದೆ. ವಿವಿಧ ಚುನಾವಣಾಪೂರ್ವ ಸಮೀಕ್ಷೆಗಳು ಈಗಾಗಲೇ ಪ್ರಕಟಗೊಂಡಿವೆ. ಸಮೀಕ್ಷೆಗಳೆಲ್ಲವೂ ನೂರಕ್ಕೆ ನೂರರಷ್ಟು ಸರಿಯಾಗಿರುತ್ತವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೂ ಅದೊಂದು ದಿಕ್ಸೂಚಿ.
ಕರ್ನಾಟಕದ ದಕ್ಷಿಣ ಭಾಗದ ಹದಿನಾಲ್ಕು ಕ್ಷೇತ್ರಗಳಲ್ಲಿ ಎಪ್ರಿಲ್ ೨೬ ರಂದು ಮತದಾನ ನಡೆಯಲಿದೆ. ನಂತರ ಮೇ ೭ ರಂದು.
ಬಿಜೆಪಿ ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಕಾಂಗ್ರೆಸ್ ಏಕಾಕಿಯಾಗಿ ಸ್ಪರ್ಧಿಸುತ್ತಿದೆ. ಬೇರೆ ಯಾವುದೇ ಪ್ರಬಲ ಪಕ್ಷ ಕರ್ನಾಟಕದಲ್ಲಿಲ್ಲ. ಆದ್ದರಿಂದ ಕೆಲವೆಡೆ ಪಕ್ಷೇತರರು ಕಣದಲ್ಲಿ ತಮ್ಮ ವೈಯಕ್ತಿಕ ಪ್ರಭಾವ ತೋರಿಸುವುದುಂಟು. ಅವರಲ್ಲಿ ಠೇವಣಿ ಕಳೆದುಕೊಳ್ಳುವವರೇ ಜಾಸ್ತಿ.
ಮೈಸೂರಿನಲ್ಲಿ ರಾಜಮನೆತನದ ಯದುವೀರ್ ಕಣದಲ್ಲಿದ್ದಾರೆ. ಆ ಕ್ಷೇತ್ರವನ್ನು ಸಿಎಂ ಸಿದ್ಧರಾಮಯ್ಯ ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಯದುವೀರ ಅವರಿಗೆ ಅಲ್ಲಿ ಎರಡು ಮೂರು ಅಂಶಗಳು ಅನುಕೂಲಕರವಾಗಿವೆ. ಒಂದು – ಆ ಭಾಗದಲ್ಲಿ ರಾಜಮನೆತನದ ಕುರಿತಾಗಿ ಇನ್ನೂ ಹಲವರಲ್ಲಿ ಉಳಿದುಕೊಂಡಿರುವ ನಿಷ್ಠೆ ಮತ್ತು ಗೌರವ. ಎರಡು- ಬಿಜೆಪಿ/ ಮೋದಿ ಮತಗಳು. ಮೂರು- ಕೆಲಮಟ್ಟಿಗೆ ಜೆಡಿಎಸ್ ಮತಗಳು. ಆದ್ದರಿಂದ ಯದುವೀರ ಅವರು ಅಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತ.
ಮಂಡ್ಯದಲ್ಲಿ ಸಹ ಕುಮಾರಸ್ವಾಮಿ ಗೆಲುವಿಗೆ ಸುಮಲತಾ ಅವರ ನಿಲುವು ಸಹಕಾರಿಯಾಗಿದ್ದು ಬಿಜೆಪಿ ಹಾಗೂ ಜೆಡಿಎಸ್ ಮತಗಳನ್ನು ಅವರು ಪಡೆಯಲಿದ್ದಾರೆ.
ಬೆಂಗಳೂರು ಗ್ರಾಮಾಂತರ ರಾಜ್ಯದ ಗಮನ ಸೆಳೆದಿರುವ ಇನ್ನೊಂದು ಮಹತ್ವದ ಕ್ಷೇತ್ರ. ಡಿಕೆ ಸಹೋದರರ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಈ ಸಲ ಹೃದಯ ತಜ್ಞ ಡಾ. ಮಂಜುನಾಥ ಅವರು ಸ್ಪರ್ಧಿಸುತ್ತಿದ್ದು ತೀವ್ರ ಪೈಪೋಟಿ ನೀಡುವ ಲಕ್ಷಣಗಳು ಕಂಡುಬರುತ್ತಿವೆ. ಡಿಕೆ ಸಹೋದರರ ಪಾಳೇಗಾರಿಕೆ, ದುಂಡಾವರ್ತನೆಗಳ ವಿರುದ್ದ ಅಲ್ಲಿನ ಜನರಲ್ಲಿ ಒಳಗಿಂದೊಳಗೇ ಬೆಳೆದಿರುವ ಅಸಹನೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ. ಮಂಜುನಾಥ ಅವರ ಬಗ್ಗೆ ಜನಾಭಿಪ್ರಾಯ ಚೆನ್ನಾಗಿದೆ. ಆದರೆ ಹಣದ ಬಲ, ದೇಹಬಲ ಮತ್ತು ಗ್ಯಾರಂಟಿ ಬಲಗಳ ವಿರುದ್ಧ ಅವರು ಹೋರಾಡಬೇಕಾಗಿದೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಬಹಳ ಕಠಿಣ ಸ್ಪರ್ಧೆ ಎನ್ನುವುದಂತೂ ನಿಜ.
ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಮತ್ತು ಜಯಪ್ರಕಾಶ ಹೆಗ್ಡೆ ನಡುವೆ ತೀವ್ರ ಪೈಪೋಟಿಯಿದೆ. ಹೆಗ್ಡೆ ಹಿಂದೆ ಸಂಸದರಾದವರೇ. ಅವರ ಪ್ರಭಾವ ಸಾಕಷ್ಟಿದೆ. ಸರಳ ಮತ್ತು ಪ್ರಾಮಾಣಿಕ ಅಭ್ಯರ್ಥಿಯೆಂದೇ ಹೆಸರಾದ ಕೋಟ ಅವರಿಗೆ ಮೋದಿ ಹೆಸರಿನ ಬಲ ಸೇರಿ ಜಯ ತಂದುಕೊಡಬಹುದು.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಹಜವಾಗಿಯೇ ಹೆಚ್ಚು ಬಲ ಹೊಂದಿರುವದರಿಂದ ಮತ್ತು ಅಭ್ಯರ್ಥಿಯ ಕುರಿತು ಸದಭಿಪ್ರಾಯವಿರುವುದರಿಂದ ಗೆಲುವು ನಿರೀಕ್ಷಿಸಬಹುದಾಗಿದೆ.
ಉತ್ತರ ಕನ್ನಡದಲ್ಲಿ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಸ್ವಲ್ಪ ಗೊಂದಲವಿತ್ತಾದರೂ ಕಾಂಗ್ರೆಸ್ ಅಭ್ಯರ್ಥಿ ಪರಕೀಯರೆಂಬ ಅಂಶ ಮತ್ತು ಮೋದಿ ಫ್ಯಾಕ್ಟರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗೆಲುವಿಗೆ ಹಾದಿ ಮಾಡಿಕೊಡಬಹುದಾಗಿದೆ. ಕಾಗೇರಿಯವರ ಕಳಂಕರಹಿತ ಮತ್ತು ವಿವಾದರಹಿತ ರಾಜಕೀಯ ಜೀವನ, ಸರಳ ಸಜ್ಜನಿಕೆಯ ಜೀವನ ಶೈಲಿಯ ಬಗ್ಗೆ ಹೆಚ್ಚಿನವರಲ್ಲಿ ಮೆಚ್ಚುಗೆ ಇದೆ. ಕಾಂಗ್ರೆಸ್ ಅಭ್ಯರ್ಥಿಯಾಗಲು ಜಿಲ್ಲೆಯ ಹೊರಗಿನವರನ್ನು ಮತ್ತು ಮರಾಠಿ ಭಾಷಿಕರನ್ನು ಆಯ್ಕೆ ಮಾಡಿರುವ ಕುರಿತಾಗಿಯೂ ಅಸಮಾಧಾನ ಇದೆ.
ಹುಬ್ಬಳ್ಳಿ ಧಾರವಾಡ ಮತಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿಯವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಮೋದಿ ಸಂಪುಟದಲ್ಲಿ ಅವರು ಪಡೆದಿರುವ ಮಹತ್ವದ ಸ್ಥಾನಗಳು ಮತ್ತೊಂದು ಗೆಲುವನ್ನು ತಂದುಕೊಡುವ ನಿರೀಕ್ಷೆ ಇದೆ. ಅವರ ವಿರುದ್ಧ ಲಿಂಗಾಯತ ಸ್ವಾಮಿಯೊಬ್ಬರು ನಿಂತು ಮತ ಒಡೆಯುವ ಪ್ರಯತ್ನ ಮಾಡಬಹುದಾದರೂ ಆ ಪ್ರಯತ್ನಕ್ಕೆ ಯಶ ಸಿಗಲಿಕ್ಕಿಲ್ಲ. ಮುಖ್ಯವಾಗಿ ಅಭ್ಯರ್ಥಿಯಾದವರ ಬಗ್ಗೆ ಜನರಲ್ಲಿ ಸದಭಿಪ್ರಾಯ ಇರುವುದು ಮುಖ್ಯ.
ಬೆಳಗಾವಿ ಮತ್ತು ಚಿಕ್ಕೋಡಿಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಸ್ಪರ್ಧೆ ಒಡ್ಡುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ನಿಂದ ಇಲ್ಲಿ ಸಚಿವರ ಮಕ್ಕಳೇ ಸ್ಪರ್ಧೆಗಿಳಿದಿದ್ದು ಅವರನ್ನು ಹೇಗಾದರೂ ಗೆಲ್ಲಿಸಿಕೊಳ್ಳಲೇಬೇಕಾದ ಪ್ರತಿಷ್ಠೆಯ ಪ್ರಶ್ನೆ ಎರಡೂ ಕಡೆ ಇದೆ. ಜಗದೀಶ್ ಶೆಟ್ಟರ್ ಕುರಿತು ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಇದ್ದೇಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ಎಲ್ಲ ಬಗೆಯ ಪ್ರಯತ್ನ ನಡೆಸಿದ್ದಾರೆ. ಚಿಕ್ಕೋಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಮಗಳನ್ನು ಗೆಲ್ಲಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.ಈ ಎರಡೂ ಕ್ಷೇತ್ರಗಳಲ್ಲಿ ಹೊಯ್ದಾಟ ಇದ್ದೇಇದೆ.
ರಾಜ್ಯದ ೨೮ ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗಳು ಒಟ್ಟು ೨೦ ಸ್ಥಾನಗಳನ್ನು ಗೆಲ್ಲುವ ಸಂಭವವಿದ್ದು ಕಾಂಗ್ರೆಸ್ ೮ ಕಡೆ ಗೆಲುವು ದಾಖಲಿಸಬಹುದು. ಮಹಿಳಾ ಮತದಾರರ ಒಲವು ಯಾವ ಕಡೆ ಎನ್ನುವುದೂ ಕೆಲವೆಡೆ ಒಂದು ಮಹತ್ವದ ಅಂಶವಾಗಿ ಪರಿಣಮಿಸಬಹುದು.
– ಎಲ್. ಎಸ್. ಶಾಸ್ತ್ರಿ