Join The Telegram | Join The WhatsApp |
ಬೆಂಗಳೂರು, ಜನವರಿ 20 :
ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆಯನ್ನು ಫೆಬ್ರವರಿ ಅಂತ್ಯದಲ್ಲಿ ಆರಂಭಿಸಲು ರೂಪರೇಷೆ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಲ್ಲೇಶ್ವರಂ ನ ಭಾರತೀಯ ಜನತಾ ಪಕ್ಷದ ಜಗನ್ನಾಥ ಭವನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಭಾರತೀಯ ಜನತಾ ಪಕ್ಷದ ಸಭೆ ನಡೆದಿದೆ. ಬರುವ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಅಧಿವೇಶನದ ಜೊತೆಜೊತೆಗೆ ಪಕ್ಷದ ಸಂಘಟನೆ, ಫೆಬ್ರವರಿ ಅಂತ್ಯದವರೆಗೆ ಜನ ಸಂಕಲ್ಪ ಯಾತ್ರೆ ಮುಂದುವರೆಸುವುದು.ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ದ ಪಡಿಸುವುದು. ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
ನಾಳೆ ಪ್ರಾರಂಭವಾಗುವ ಬೂತ್ ಮಟ್ಟದ ವಿಜಯಸಂಕಲ್ಪ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಭಾಗವಹಿಸಲು ಬರುತ್ತಿದ್ದಾರೆ. ವಿಜಯ ಯಾತ್ರೆ ಅರಂಭಿಸುತ್ತಿದ್ದಾರೆ. ನಾನು ತುಮಕೂರಿನಲ್ಲಿ ಯಾತ್ರೆಯನ್ನು ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸುವುದು, ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು , ಹಲವು ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಎಲ್ಲೆಡೆ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದರು.
ಭಾಜಪ ಪಕ್ಷದ ಅಬ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಚುನಾವಣೆ ತಯಾರಿ, ಪಕ್ಷದ ಸಂಘಟನೆ ಹಾಗೂ ಜನಸಂಪರ್ಕದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ನಾವು ಈಗ ಪ್ರಾಥಮಿಕ ಹಂತದ ಚರ್ಚೆ ಮಾಡಿದ್ದೇವೆ. ಮುಂದಿನ ಹಂತದಲ್ಲಿ ಯಡಿಯೂರಪ್ಪ ಅವರ ಜೊತೆ ಚರ್ಚಿಸುತ್ತೇವೆ ಎಂದರು.
ಹಾವೇರಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯಲಿದ್ದಾರೆ ಎಂಬುದನ್ನು ಅವರು ಗಮನಿಸಲಿ. ಅವರು ಹತಾಶೆಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
Join The Telegram | Join The WhatsApp |