ನವದೆಹಲಿ: ಮೊದಲ ವಂದೇ ಭಾರತ್ ರೈಲನ್ನು 2019ರ ಫೆಬ್ರವರಿ 15ರಂದು ಉದ್ಘಾಟಿಸಲಾಗಿತ್ತು. ಅನಂತರ ದೇಶದ ಪ್ರಮುಖ ಮಹಾನಗರಗಳ ನಡುವೆ ವಂದೇ ಭಾರತ್ ರೈಲು ಓಡಾಡುತ್ತಿದ್ದು ಇದು ಭಾರತದಲ್ಲಿ ಅತ್ಯಂತ ವೇಗವಾಗಿ ಸಂಚರಿಸುವ ರೈಲು ಎನಿಸಿಕೊಂಡಿದೆ. ಸದ್ಯಕ್ಕೆ ದೇಶದ ಜಿಲ್ಲಾ ಕೇಂದ್ರಗಳು ಹಾಗೂ ಅತಿ ದೊಡ್ಡ ನಗರಗಳಲ್ಲಿ ಮಾತ್ರ ನಿಲುಗಡೆಯಾಗುತ್ತಿದೆ.

ಆರು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಾರ್ಖಂಡ್‌ಗೆ ತೆರಳಲಿದ್ದು, ಟಾಟಾನಗರ ಜಂಕ್ಷನ್ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೈಲುಗಳು ಟಾಟಾನಗರ-ಪಟ್ನಾ, ಬ್ರಹ್ಮಪುರ-ಟಾಟಾನಗರ, ರೂರ್ಕೆಲಾ-ಹೌರಾ, ದಿಯೋಘ‌ರ್-ವಾರಾಣಸಿ, ಭಾಗಲ್ಪುರ್-ಹೌರಾ ಮತ್ತು ಗಯಾ-ಹೌರಾಗಳನ್ನು ಒಳಗೊಂಡಿರುವ ಆರು ಹೊಸ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಆದರೆ..
ಆದರೆ ಕರುನಾಡಿನ ಹುಬ್ಬಳ್ಳಿ ಮತ್ತು ಮಹಾರಾಷ್ಟ್ರದ ಸಾಂಸ್ಕೃತಿಕ ನಗರ ಪುಣೆ ಮಹಾನಗರಗಳ ನಡುವೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಚಾಲನೆ ನೀಡಲಿದ್ದಾರೆ. ಇದು ಕರ್ನಾಟಕದ ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿ ಮೂಲಕ ಸಂಚರಿಸಲಿದೆ ಎನ್ನುವುದು ಈ ಭಾಗದ ಜನರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.