ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದೊಂದಿಗೆ ನಡೆದ ಒಂದು ದಿನದ ಸಭೆಯ ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ಅವರು, ಮುಂಬರುವ ಲೋಕಸಭೆ ಚುನಾವಣೆ ಘೋಷಣೆಗೆ ಮುಂಚಿತವಾಗಿಯೇ ತಮ್ಮ ಸಚಿವರಿಗೆ “ಹೋಗಿ, ಗೆದ್ದುಬನ್ನಿ, ನಾನು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ” ಎಂದು ಸಂದೇಶ ನೀಡಿದ್ದಾರೆ.

ನಿರ್ಣಾಯಕ ಸಭೆಯಲ್ಲಿ ವಿಷನ್ ಡಾಕ್ಯುಮೆಂಟ್ ‘ವಿಕಸಿತ ಭಾರತ 2047’ ಕುರಿತು ಚರ್ಚೆ ಮತ್ತು ಮುಂದಿನ ಐದು ವರ್ಷಗಳ ವಿವರವಾದ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಲಾಯಿತು. ಮೂಲಗಳ ಪ್ರಕಾರ, ಜನರನ್ನು ಭೇಟಿಯಾಗುವಾಗ, ವಿಶೇಷವಾಗಿ ಚುನಾವಣಾ ಸಮಯದಲ್ಲಿ ಜಾಗರೂಕರಾಗಿರಿ ಎಂದು ಪ್ರಧಾನಿ ಮೋದಿಯವರು ತಮ್ಮ ಸಂಪುಟದ ಸಹೊದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸುಮಾರು ಒಂದು ಗಂಟೆ ಭಾಷಣ ಮಾಡಿದ ಪ್ರಧಾನಿ ಮೋದಿ, ಯಾವುದೇ ವಿವಾದ ಮಾಡಿಕೊಳ್ಳಬೇಡಿ ಮತ್ತು ಡೀಪ್‌ಫೇಕ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ದಯವಿಟ್ಟು ಎಚ್ಚರದಿಂದಿರಿ. ಇತ್ತೀಚಿನ ದಿನಗಳಲ್ಲಿ, ಧ್ವನಿ ಇತ್ಯಾದಿಗಳನ್ನು ಬದಲಾಯಿಸಬಹುದಾದ ಡೀಪ್‌ಫೇಕ್ ಪ್ರವೃತ್ತಿ ಹೆಚ್ಚುತ್ತಿದೆ. ಈ ಬಗ್ಗೆ ಜಾಗರೂಕರಾಗಿರಿ” ಎಂದು ಹೇಳಿದ್ದಾರ
ಡೀಪ್‌ಫೇಕ್ ವೀಡಿಯೊಗಳು ಸಿಂಥೆಟಿಕ್ ಮಾಧ್ಯಮವಾಗಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ಚಿತ್ರ ಅಥವಾ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಬೇರೆಯವರ ಹೋಲಿಕೆಯೊಂದಿಗೆ ಬದಲಾಯಿಸಲಾಗುತ್ತದೆ.

ಜೂನ್‌ನಲ್ಲಿ ಮುಂಬರುವ ಪೂರ್ಣ ಬಜೆಟ್‌ನಲ್ಲಿ ‘ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ)’ದ ನೋಟವು ಗೋಚರಿಸಬೇಕು ಎಂದು ಪ್ರಧಾನಿ ಹೇಳಿದರು ಎಂದು ಮೂಲಗಳು ತಿಳಿಸಿವೆ. ಇಲಾಖಾ ಕಾರ್ಯಸೂಚಿಯಲ್ಲಿ ವಿಕಸಿತ ಭಾರತ ಸೆಮಿನಾರ್‌ಗಳನ್ನು ಸೇರಿಸಬೇಕು. ಸಿಐಐ (CII) ಮತ್ತು ಎಫ್‌ಐಸಿಸಿಐ (FICCI)ನಂತಹ ವ್ಯಾಪಾರ ಸಂಸ್ಥೆಗಳು ಈ ಕುರಿತು ಸಂವಾದ ಪ್ರಾರಂಭಿಸಲು ಒತ್ತಾಯಿಸಬೇಕು. ಈ ಕುರಿತು ಕ್ರಿಯಾ ಯೋಜನೆ ಮತ್ತು ಐಡಿಯಾಗಳನ್ನು ಸಿದ್ಧಪಡಿಸಬೇಕು ಎಂದು ಇಲಾಖೆಗಳಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಮೇ ವೇಳೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಮೇ ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳಿಗಾಗಿ 100 ದಿನಗಳ ಕಾರ್ಯಸೂಚಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ವಿವಿಧ ಹಂತಗಳಲ್ಲಿ 2,700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. 20 ಲಕ್ಷಕ್ಕೂ ಹೆಚ್ಚು ಯುವಕರ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿ ಅವರು ಭವಿಷ್ಯದ ತಂತ್ರಜ್ಞಾನಗಳಿಗೆ ₹ 1 ಲಕ್ಷ ಕೋಟಿ ಬಜೆಟ್‌ನ ಬಗ್ಗೆ ಮಾತನಾಡಿದರು ಮತ್ತು ಭಾರತವು ನಾವೀನ್ಯತೆಗೆ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಸಚಿವರು ಮತ್ತು ಅಧಿಕಾರಿಗಳು ಆಯಾ ಸಚಿವಾಲಯಗಳಲ್ಲಿನ ದಾಖಲೆಗಳನ್ನು ಪರಿಶೀಲಿಸಲು ಮತ್ತು ಹಿಂದಿನ ನಿರ್ಧಾರಗಳು ಹೇಗೆ ವಿಕಸನಗೊಂಡಿವೆ ಮತ್ತು ಕಳೆದ 25 ವರ್ಷಗಳಲ್ಲಿ ಆಲೋಚನೆಗಳು ಹೇಗೆ ಬದಲಾಗಿವೆ ಎಂಬುದನ್ನು ಸಹ ಪರಿಶೀಲಿಸುವಂತೆ ಅವರು ಹೇಳಿದರು. ಸಭೆಯಲ್ಲಿ ಹಲವಾರು ಸಚಿವಾಲಯಗಳು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದವು.