ದೆಹಲಿ :
ಅಂದು 4 ಆಗಸ್ಟ್ 2019, ಸಂಜೆ ಪ್ರಧಾನಿ ನರೇಂದ್ರ ಮೋದಿ ಹಠಾತ್ತನೆ ರಾಷ್ಟ್ರಪತಿ ಭವನಕ್ಕೆ ತಲುಪಿದ್ದರು.
ಅವರ ಆಗಮನದ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿತ್ತು. ಅವರು ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಕಾರು ವಿಶೇಷ ಭದ್ರತೆ ಹೊಂದಿರುವ ಕಾರು ಆಗಿರಲಿಲ್ಲ. ಹೆಚ್ಚಿನ ಭದ್ರತಾ ಸಿಬ್ಬಂದಿಗಳೂ ಸುತ್ತಮುತ್ತಲಿರಲಿಲ್ಲ. ಒಬ್ಬರೇ ಕುಳಿತು ರಾಷ್ಟ್ರಪತಿ ಭವನ ತಲುಪಿದ್ದರು. ಯಾವುದೇ ನಿರ್ದಿಷ್ಟ ನಿರ್ಧಾರದ ಬಗ್ಗೆ ಪ್ರಧಾನಿ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು.
370 ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ತಮ್ಮ ಸರ್ಕಾರದ ಮಹತ್ವದ ನಿರ್ಧಾರದ ಬಗ್ಗೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ತಿಳಿಸಲು ಪ್ರಧಾನಿ ಹೋಗಿದ್ದರು. ಈ ರಹಸ್ಯವು ರಾಜಕೀಯ ಎದುರಾಳಿಗಳನ್ನು ಅಚ್ಚರಿಗೊಳಿಸುವ ದೊಡ್ಡ
ಯೋಜನೆಯ ಭಾಗವಾಗಿತ್ತು. ನಿರೀಕ್ಷೆಯಂತೆ ಈ ಬದಲಾವಣೆಯು ಪ್ರತಿಪಕ್ಷಗಳಿಂದ ವ್ಯಾಪಕ ಖಂಡನೆಯಾಗುವ ಜತೆಗೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಇತ್ತು. ಹೀಗಾಗಿ ಯಾವುದೇ ಪ್ರಮುಖ ಚುನಾವಣೆಗಳು ಸಮೀಪದಲ್ಲಿ ಇಲ್ಲದ ಸಮಯದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ಕೈಗೊಂಡಿದ್ದರು.
ರಾಜ್ಯಸಭೆಯಲ್ಲಿ ಎನ್ಡಿಎಗೆ ಬಹುಮತ ಇಲ್ಲದಿದ್ದಾಗ, ಲೋಕಸಭೆಯಲ್ಲಿ ಬಿಜೆಪಿಗೆ ಒಂದೇ ಬಹುಮತವಿದ್ದಲ್ಲಿ ಮಸೂದೆಯನ್ನು ಮೊದಲು ಮಂಡಿಸಲು ಸಾಧ್ಯವಾಗಿರಲಿಲ್ಲ. ಲೋಕಸಭೆಯಲ್ಲಿ ಏಕಾಏಕಿ 370ನೇ ವಿಧಿ ರದ್ದು ಮಾಡುವ ವಿಚಾರ ಪ್ರಸ್ತಾಪವಾದರೆ ಪ್ರತಿಪಕ್ಷಗಳನ್ನು ಎಚ್ಚರಿಸಿದಂತಾಗುತ್ತಿತ್ತು. ಹಾಗಾಗಿ 2019ರಲ್ಲಿ ಸರ್ಕಾರ ಗೆಲುವು ಸಾಧಿಸುವವರೆಗೆ ಕಾದಿದ್ದರು. ಅಂದು 2019ರ ಆಗಸ್ಟ್ 5, ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿಯಮಾವಳಿಯಂತೆ ಸ್ಪೀಕರ್ ಅವರಿಗೆ ವಿಶೇಷ ಎರಡು ಮಸೂದೆಗಳನ್ನು ಮಂಡಿಸಲು ಅವಕಾಶ ಕೋರಿದ್ದರು. ಸ್ಪೀಕರ್ ಅವಕಾಶ ನೀಡುತ್ತಿದ್ದಂತೆ ಎದ್ದು ನಿಂತ ಗೃಹ ಸಚಿವ ಶಾ, ನೇರ ಕಾಶ್ಮೀರದ ವಿಷಯ ಪ್ರಸ್ತಾಪಿಸಿದರು.
ಈ ಹಂತದಲ್ಲಿ ಇಡೀ ಸದನ ಕೋಲಾಹಲದಲ್ಲಿ ಮುಳುಗಿತು. ಮೊದಲೇ ಸಣ್ಣ ಸುಳಿವು ಇದ್ದ ಪ್ರತಿಪಕ್ಷದ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದರು. ಗದ್ದಲದ ನಡುವೆಯೇ ಗೃಹಸಚಿವರು ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ತೆಗೆದುಹಾಕಲು ‘ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ-2019’ರ ಅಡಿಯಲ್ಲಿ ರಾಜ್ಯಸಭೆಯಲ್ಲಿ ಪರಿಗಣನೆ ಹಾಗೂ ಅಂಗೀಕಾರಕ್ಕಾಗಿ ಎರಡು ನಿರ್ಣಯಗಳು ಮತ್ತು ಎರಡು ಮಸೂದೆಗಳನ್ನು ಮಂಡಿಸಿದರು.
ಮೋದಿಯವರು ರಾಜಕೀಯ ಲಾಭದ ದೃಷ್ಟಿಕೋನದಿಂದ ನೋಡಿದ್ದರೆ ಚುನಾವಣೆಯ ಹತ್ತಿರದಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಪ್ರಕರಣಗಳ ಇಳಿಕೆ, ಪ್ರವಾಸಿಗರ ಆಗಮನದಲ್ಲಿ ಭಾರಿ ಹೆಚ್ಚಳವಾಗಿತ್ತು.