ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ವಾರಾಣಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಅವರ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 2024 ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಲೋಕಸಭಾ ಸ್ಥಾನವನ್ನು 1,52,513 ಅಂತರದಿಂದ ಪ್ರಧಾನಿ ಮೋದಿ ಗೆದ್ದಿದ್ದಾರೆ. ಪ್ರಧಾನಿ ಮೋದಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಅಜಯ ರಾಯ್ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಮಾತ್ರ ಗೆದ್ದಿದ್ದಾರೆ. 2019 ಮತ್ತು 2014ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ವಿಜಯದ ಅಂತರ ಗಣನೀಯವಾಗಿ ಕಡಿಮೆಯಾಗಿದೆ.

ಮೋದಿ 6,12,970 ಮತಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಅಜಯ ರಾಯ್ 460457 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಮತಗಳಲ್ಲಿ ಮೋದಿ ಪಾಲು ಶೇಕಡಾ 54.24 ಹಾಗೂ ಪ್ರತಿಸ್ಪರ್ಧಿ ಪಡೆದ ಶೇಕಡಾವಾರು ಮತ 40.74. ಆಗಿದೆ. ವಾರಾಣಸಿಯಲ್ಲಿ ನೋಟಾಗೆ 8257 ಮತಗಳು ಚಲಾವಣೆಯಾಗಿವೆ. ಮತ ಎಣಿಕೆ ವೇಳೆ ನರೇಂದ್ರ ಮೋದಿ ಆರಂಭಿಕ ಹಂತದಲ್ಲಿ ಹಿನ್ನಡೆಗೆ ಒಳಗಾಗಿದ್ದರು. ಆರಂಭಿಕ ಸುತ್ತಿನ ವೇಳೆ ಅವರು 6000 ಮತಗಳ ಹಿನ್ನಡೆಯನ್ನೂ ಅನುಭವಿಸಿದ್ದರು. ಆದರೆ, ಮತ್ತೆ ಸುಧಾರಿಸಿಕೊಂಡು ಮುನ್ನಡೆ ಪಡೆದರು.

2019 ರ ಲೋಕಸಭಾ ಚುನಾವಣೆಯಲ್ಲಿ, ಪಿಎಂ ಮೋದಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 4,79,505 ಮತಗಳ (45.2%) ಅಂತರದಿಂದ ಗೆದ್ದಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಅವರು 3,71,784 ಮತಗಳ (36.14 %) ಅಂತರದಿಂದ ಗೆದ್ದರು.