ಬೆಂಗಳೂರು: ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಕರಿಗೆ ಲಭ್ಯವಾಗುವಂತೆ ಶಾಲಾ ಸೂಚನಾ ಫಲಕ ಹಾಗೂ ಇಲಾಖಾ ಜಾಲತಾಣದಲ್ಲಿ (ಎಸ್‌ಎಟಿಎಸ್) ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲ ಶಾಲೆಗಳ ಆಡಳಿತ ಮಂಡಳಿಗಳು ತಾವು ನಿಗದಿಪಡಿಸುವ ಶುಲ್ಕದ ವಿವರ, ವಿದ್ಯಾರ್ಥಿಗಳ ದಾಖಲಾತಿ, ವಸೂಲಾದ ಶುಲ್ಕದ ಮಾಹಿತಿಯನ್ನು ಪೋಷಕರಿಗೆ ಲಭ್ಯವಾಗುವಂತೆ ಸಾರ್ವತ್ರಿಕವಾಗಿ ಪ್ರಕಟಿಸುವುದು ಕಡ್ಡಾಯ. ಯಾವುದೇ ಶಾಲೆಗಳು ನಿಯಮಗಳನ್ನು ಪಾಲಿಸದೇ ದೂರು ದಾಖಲಾದಲ್ಲಿ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ನಿಯಮಗಳ ಅಡಿಯಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಹುತೇಕ ಖಾಸಗಿ ಶಾಲೆಗಳು ಶೇ 30ರಿಂದ 40ರಷ್ಟು ಶುಲ್ಕವನ್ನು ಹೆಚ್ಚಿಸಿದ್ದವು. ಈ ಕುರಿತು ಹಲವು ಪೋಷಕರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು.