ಕಲಬುರಗಿ: ಅಣ್ಣಾಮಲೈ ಒಬ್ಬ ಅಸಮರ್ಥ ಅಧಿಕಾರಿ. ಅವರು ಕೆಲಸ ಬಿಟ್ಟು ತಮಿಳುನಾಡಿಗೆ ಹೋಗಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಒಬ್ಬ ಅಸಮರ್ಥ ಅಧಿಕಾರಿ ರಾಜ್ಯದಲ್ಲಿ ಇರುವಂತಾಗುತ್ತಿತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಅಣ್ಣಾಮಲೈ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡಿದವರು.

ಕಾನೂನು ಪ್ರಕ್ರಿಯೆ ಬಗ್ಗೆ ಅವರಿಗೆ ಗೊತ್ತಿಲ್ಲವಾ? ಪ್ರಜ್ವಲ್‌ ಪೆನ್‌ಡ್ರೈವ್‌, ನೇಹಾ ಹತ್ಯೆ ಪ್ರಕರಣಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್‌ ಶಾ, ನಡ್ಡಾ, ಅಶೋಕ, ವಿಜಯೇಂದ್ರ ಸಹಿತ ಅನೇಕ ನಾಯಕರು ಹುಬ್ಬಳ್ಳಿ ಪ್ರಕರಣದಲ್ಲಿ ತೋರಿಸಿದಷ್ಟು ಆಸಕ್ತಿ ಹಾಸನ ಪ್ರಕರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಪ್ರಜ್ವಲ್‌ ಲೈಂಗಿಕ ದೌರ್ಜನ್ಯದ ಬಗ್ಗೆ ಮೊದಲೇ ಗೊತ್ತಿದ್ದರೂ ಅವರಿಗೆ ಟಿಕೆಟ್‌ ನೀಡಿ ಅವರ ಪರ ಪ್ರಚಾರ ಕೈಗೊಂಡಿದ್ದರು. ಎಲ್ಲದಕ್ಕೂ ಮಾತನಾಡುವ ಮೋದಿ ಈ ವಿಚಾರದಲ್ಲಿ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.