ನವದೆಹಲಿ: ಎರಡು ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳಿಗೆ ಸೋಮವಾರ (ಜೂನ್‌ 17) ತೆರೆಬಿದ್ದಿದೆ. ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು, ವಯನಾಡ ಕ್ಷೇತ್ರವನ್ನು ತೊರೆಯಲಿದ್ದಾರೆ. ಆದರೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡಿನಿಂದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ವಯಾನಾಡಿನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಪಾಲ್ಗೊಂಡಿದ್ದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ತಮ್ಮ ತಾಯಿ ಸೋನಿಯಾ ಗಾಂಧಿ ಈವರೆಗೆ ಪ್ರತಿನಿಧಿಸುತ್ತಿದ್ದ ರಾಯ್​ ಬರೇಲಿಯಲ್ಲಿ ಈ ಬಾರಿ ರಾಹುಲ್ ಗಾಂಧಿ 6,87,649 ಮತಗಳನ್ನು ಗಳಿಸಿ ಬಿಜೆಪಿಯ ದಿನೇಶ್​ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳಿಂದ ಸೋಲಿಸಿದ್ದಾರೆ.

“ರಾಹುಲ್ ಗಾಂಧಿ ಯವರು ತಮ್ಮ ಕುಟುಂಬಕ್ಕೆ ಪೀಳಿಗೆಯಿಂದ ನಿಕಟವಾಗಿರುವ ಕಾರಣ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಪಕ್ಷವು ನಿರ್ಧರಿಸಿದೆ. ಕ್ಷೇತ್ರದ ಜನರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಇದರಿಂದ ಪಕ್ಷಕ್ಕೂ ಒಳ್ಳೆಯದು ಎಂದು ಭಾವಿಸುತ್ತಾರೆ. ಅದಕ್ಕಿಂತ ಮುಖ್ಯವಾಗಿ, ಅವರು ವಯನಾಡ ಜನರಿಂದ ಪ್ರೀತಿಯನ್ನು ಪಡೆದಿದ್ದಾರೆ ಮತ್ತು ಅವರು ಆ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಆದರೆ ನಿಯಮಗಳು ಇದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ ರಾಹುಲ್‌ ಗಾಂಧಿ ಬದಲಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
“ಅವರು (ಪ್ರಿಯಾಂಕಾ) ಚುನಾವಣೆಯಲ್ಲಿ ಗೆಲ್ಲುತ್ತಾರೆ ಮತ್ತು ಅವರು ಉತ್ತಮ ಪ್ರತಿನಿಧಿಯಾಗುತ್ತಾರೆ ಎಂದು ನನಗೆ ವಿಶ್ವಾಸವಿದೆ. ವಯನಾಡ ಜನರು ಈಗ ಇಬ್ಬರು ಸಂಸದರನ್ನು ಹೊಂದುತ್ತಾರೆ, ಒಬ್ಬರು ನನ್ನ ಸಹೋದರಿ ಮತ್ತು ಇನ್ನೊಬ್ಬರು ನಾನು. ನನ್ನ ಬಾಗಿಲು ನನ್ನ ಜೀವನದುದ್ದಕ್ಕೂ ವಯನಾಡಿಗೆ ಯಾವಾಗಲೂ ತೆರೆದಿರುತ್ತದೆ ಮತ್ತು ನಾನು ವಯನಾಡಿನ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.