ಬೆಳಗಾವಿ :
ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಪ್ರೊ.ಎಂ.ಎಸ್.ಇಂಚಲ ಹಾಗೂ ಸುಭಾಷ ಏಣಗಿಯವರ ಕೊಡುಗೆ ಅನನ್ಯವಾಗಿದೆ. ಸಮಾಜವು ಅವರ ಸೇವೆಗೆ ಉಪಕೃತವಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನಮಠದ ಪೂಜ್ಯ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ನುಡಿದರು.

ನಾಗನೂರು ರುದ್ರಾಕ್ಷಿಮಠದ ಎಸ್.ಜಿ.ಬಿ.ಟಿ.ಐ. ಸಭಾಗೃಹದಲ್ಲಿ ಆಯೋಜಿಸಿದ್ದ ಪ್ರೊ. ಎಂ. ಎಸ್. ಇಂಚಲ ಹಾಗೂ ಸುಭಾಷ ಏಣಗಿ ಅಮೃತ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇರ್ವರ ಪೂಜ್ಯ ತಂದೆಯವರು ಸಮಾಜದ ಗೌರವಾನ್ವಿತ ವ್ಯಕ್ತಿಗಳಾಗಿದ್ದ ಸಮಾಜಮುಖಿಗಳಾಗಿ ಬದುಕಿದ್ದರು. ಎಸ್.ಡಿ.ಇಂಚಲರ ಸುಪುತ್ರರಾದ ಪ್ರೊ.ಎಂ.ಎಸ್.ಇಂಚಲರು ಹಾಗೂ ಖ್ಯಾತ ರಂಗಕಲಾವಿದ ನಾಡೋಜ ಏಣಗಿ ಬಾಳಪ್ಪನವರ ಮಗ ಸುಭಾಷ ಏಣಗಿಯವರು ತಂದೆಯವರ ಪಥದಲ್ಲಿಯೇ ಸಾಗಿದ ಸಮಾಜಕ್ಕೆ ಬಹುನೆಲೆಗಳಲ್ಲಿ ಸೇವೆಯನ್ನು ಸಲ್ಲಿಸಿರುವುದು ಅಭಿನಂದನೀಯವೆಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಗದಗ ತೋಂಟದಾರ್ಯ ಶ್ರೀಮಠದ ಜಗದ್ಗುರು ಡಾ.ಸಿದ್ಧರಾಮ ಸ್ವಾಮೀಜಿಯವರು ಏಣಗಿ ಹಾಗೂ ಇಂಚಲ ಕುಟುಂಬ ನಾಡಿಗೆ ನೀಡಿರುವ ಕೊಡುಗೆ ಅನುಪಮವಾಗಿದೆ. ಅವರ ಸುಪುತ್ರರಾದ ಇವರು ಅದನ್ನು ಮುಂದುವರೆಸಿಕೊಂಡು ಹೋಗಿರುವುದು ಅಭಿನಂದನೀಯ. ಇಂದು ಹಿರಿಯರನ್ನು ಗೌರವಿಸುವ ಪರಂಪರೆ ದೂರ ಸರಿಯುತ್ತಿರುವ ಸಂದರ್ಭದಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು ಜೊತೆಯಾಗಿ ಎಪ್ಪತ್ತೆಂಟರ ಅಮೃತ ಮಹೋತ್ಸವವನ್ನು ಆಚರಿಸಿರುವುದು ಸಂತೋಷ ತಂದಿದೆ. ಅವರು ಶತಾಯುಷಿಗಳಾಗಲೆಂದು ಶುಭ ಕೋರಿದರು.

ಹಿರಿಯ ನ್ಯಾಯವಾದಿ ಎಸ್. ಎಂ.ಕುಲಕರ್ಣಿ ಮಾತನಾಡಿ, ಇದೊಂದು ಅಪರೂಪದ ಸಮಾರಂಭ. ಒಂದೇ ವೇದಿಕೆಯ ಮೇಲೆ ಇಬ್ಬರು ಹಿರಿಯ ಜೀವಿಗಳನ್ನು ಅವರ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಸಾಧನೆಗಳನ್ನು ಅವಲೋಕಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ದಿವ್ಯ ಸಂದೇಶ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಡಾ.ಎಚ್.ಬಿ.ರಾಜಶೇಖರ ಮಾತನಾಡಿ, ಜೀವನದ ಸಂಧ್ಯಾ ಕಾಲದಲ್ಲಿ ಅವರ ಸಾಧನೆಗಳನ್ನು ಅವಲೋಕಿಸಿ ಸಮಾಜ ಇಂತಹ ಅಪರೂಪದ ಸಮಾರಂಭಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯನ್ನುಂಟುಮಾಡಿದೆ. ಏಣಗಿ ಹಾಗೂ ಇಂಚಲರ ಕ್ಷೇತ್ರಗಳು ವಿಭಿನ್ನವಾಗಿದ್ದರೂ ಅವರು ಸಾಂಸ್ಕೃತಿಕ ವಲಯಕ್ಕೆ ನೀಡಿರುವ ಕೊಡುಗೆ ಅಸಾದೃಶ್ಯವೆನಿಸಿದೆ ಎಂದು ಹೇಳಿದರು.

ಎಂ.ಎಸ್.ಇಂಚಲರ ‘ಮುತ್ತಿನ ಗೊಂಚಲು’, ಸುಭಾಷ ಏಣಗಿಯವರ ‘ಸ್ನೇಹಭೂಷಣ’ ಅಭಿನಂದನ ಸಂಪುಟಗಳನ್ನು ಪೂಜ್ಯರು ಲೋಕಾರ್ಪಣೆ ಗೊಳಿಸಿದರು.

ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು
ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ.ಸರಜೂ ಕಾಟ್ಕರ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ರಾಮಕೃಷ್ಣ ಮರಾಠೆ ಅಭಿನಂದನಪರ ನುಡಿಗಳನ್ನಾಡಿದರು.

ಡಾ.ಎಫ್.ವಿ.ಮಾನ್ವಿ, ನೀಲಗಂಗಾ ಚರಂತಿಮಠ, ಆರ್.ಬಿ.ಕಟ್ಟಿ, ಎಂ.ವಿ.ಅಣ್ಣಿಗೇರಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಬಸವರಾಜ ಜಗಜಂಪಿ ಸ್ವಾಗತಿಸಿದರು. ಬಿ.ಎಸ್.ಗವಿಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಯನಾ ಗಿರಿಗೌಡರ ವಚನ ಪ್ರಾರ್ಥನೆ ಸಲ್ಲಿಸಿದರು. ಶಿರೀಷ ಜೋಶಿ ಹಾಗೂ ಯ.ರು.ಪಾಟೀಲ ಅಭಿನಂದನ ಪತ್ರ ವಾಚಿಸಿದರು. ಡಾ.ಪಿ.ಜಿ. ಕೆಂಪಣ್ಣನವರ ಹಾಗೂ ಬಸವರಾಜ ಗಾರ್ಗಿ ನಿರೂಪಿಸಿದರು. ಡಾ.ಮಹೇಶ ಗುರನಗೌಡರ ವಂದಿಸಿದರು.