ನವದೆಹಲಿ:
ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರನ್ನೂ ಆಹ್ವಾನಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಆಹ್ವಾನ ನೀಡಲಾಗಿದೆ.
ಇಕ್ಬಾಲ್ ಅನ್ಸಾರಿ ಅವರು ಬಾಬರಿ ಮಸೀದಿಯ ಪ್ರಮುಖ ಪ್ರತಿಪಾದಕರಾಗಿದ್ದಾರೆ. ಆಗಸ್ಟ್ 5, 2020 ರಂದು ನಡೆದ ರಾಮಮಂದಿರದ ‘ಭೂಮಿಪೂಜನ’ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಸ್ವೀಕರಿಸಿದ್ದರು.
ಇಕ್ಬಾಲ್ ಅನ್ಸಾರಿ ಅವರ ತಂದೆ ಹಾಶಿಮ್ ಅನ್ಸಾರಿ ಅವರು ರಾಮ ಜನ್ಮಭೂಮಿ ಮಾಲೀಕತ್ವದ ವಿವಾದದ ಪ್ರಮುಖ ಫಿರ್ಯಾದಿಯಾಗಿದ್ದರು. ತಮ್ಮ ಮರಣದ ನಂತರ ಮಗ ಇಕ್ಬಾಲ್ ಅನ್ಸಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಾಬರಿ ಮಸೀದಿಗಾಗಿ ಕಾನೂನು ಹೋರಾಟ ಮುಂದುವರೆಸಿದ್ದರು. 9 ನವೆಂಬರ್ 2019 ರಂದು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿಯ ಮಾಲೀಕತ್ವವನ್ನು ಹಿಂದೂ ಪಕ್ಷಕ್ಕೆ ಹಸ್ತಾಂತರಿಸುವಂತೆ ತೀರ್ಪು ನೀಡಿತು. ಆಗ ಇಕ್ಬಾಲ್ ಅನ್ಸಾರಿ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದರು. ನೂರಾರು ವರ್ಷಗಳ ಈ ವಿವಾದವನ್ನು ಕೊನೆಗೊಳಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ.
ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದ ಆರಂಭಿಕ ಆಹ್ವಾನವನ್ನು ಇಕ್ಬಾಲ್ ಅನ್ಸಾರಿಗೆ ಕಳುಹಿಸಲಾಗಿತ್ತು ಎಂಬುದು ಉಲ್ಲೇಖನೀಯ. ಆಗ ಅವರು, ‘ನನಗೆ ಮೊದಲ ಆಮಂತ್ರಣ ಸಿಕ್ಕಿದ್ದು ರಾಮನ ದಿವ್ಯ ಆಶಯವಾಗಿರಬಹುದು. ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದು ಹೇಳಿದ್ದರು.
ಅಯೋಧ್ಯೆ ಹಿಂದೂ-ಮುಸ್ಲಿಂ-ಸಿಖ್-ಕ್ರೈಸ್ತರ ನಾಡು ಎಂದು ಪ್ರತಿಪಾದಿಸಿದ ಅವರು, ರಾಜ್ಯದಲ್ಲಿ ಸೌಹಾರ್ದತೆ ಅಖಂಡವಾಗಿ ಉಳಿಯಲಿದೆ ಎಂದರು.
“ಸುಪ್ರೀಂ ಕೋರ್ಟ್ ತೀರ್ಪು ನೀಡಿತು ಮತ್ತು ದೇಶಾದ್ಯಂತ ಮುಸ್ಲಿಮರು ಅದನ್ನು ಗೌರವಿಸಿದರು. ದೇಶದಲ್ಲಿ ಎಲ್ಲಿಯೂ ಪ್ರತಿಭಟನೆಗಳು ನಡೆದಿಲ್ಲ. ಅಯೋಧ್ಯೆಯ ಜನರು ಸಂತೋಷವಾಗಿದ್ದಾರೆ, ನನಗೂ ಸಂತೋಷವಾಗಿದೆ ಎಂದು ಆಹ್ವಾನವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ ಹೇಳಿದರು.
ಪ್ರಧಾನಿ ಮೋದಿ ಮೇಲೆ ಪುಷ್ಪವೃಷ್ಟಿ ಮಾಡಿದ್ದ ಇಕ್ಬಾಲ್ ಅನ್ಸಾರಿ :
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಅಲ್ಲಿ ರೋಡ್ ಶೋ ಮಾಡಿದ್ದರು. ಆಗ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರತಿ ಸಾಲಿನಲ್ಲಿ ನಿಂತು ಸ್ವಾಗತಿಸಿದ ನೂರಾರು ಜನರಲ್ಲಿ ಅನ್ಸಾರಿ ಕೂಡ ಒಬ್ಬರು. ಈ ವೇಳೆ ಇಕ್ಬಾಲ್ ಅನ್ಸಾರಿ ಅವರು ಪ್ರಧಾನಿ ಮೋದಿಯವರ ಮೇಲೆ ಹೂವಿನ ಮಳೆಗರೆದರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಇಕ್ಬಾಲ್ ಅನ್ಸಾರಿ, ಅಯೋಧ್ಯೆಗೆ ಬರುವವರು ನಮ್ಮ ಅತಿಥಿಗಳು. ಅವರಿಗೆ ನಮಸ್ಕಾರ ಮಾಡುವುದು ನಮ್ಮ ಧರ್ಮ ಮತ್ತು ಸಂಪ್ರದಾಯ. ನಮ್ಮ ದೇಶದ ಪ್ರಧಾನಿ ಅಯೋಧ್ಯೆಗೆ ಬಂದಿದ್ದು, ಅವರನ್ನು ಸ್ವಾಗತಿಸಲು ನಾನು ಪುಷ್ಪವೃಷ್ಟಿ ಮಾಡಿದೆ ಎಂದು ಹೇಳಿದರು.
ಜನವರಿ 22 ರಂದು ದೇವಾಲಯದಲ್ಲಿ ಅಯೋಧ್ಯೆ ಪ್ರಾಣ ಪ್ರತಿಷ್ಠೆಗೆ ಸಜ್ಜುಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. 7,000 ಆಹ್ವಾನಿತ ಅತಿಥಿಗಳು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.