ಬೆಂಗಳೂರು: ಬೆಂಗಳೂರಿನ ಭಾಗವಾಗಿ ತುಮಕೂರು ಬೆಳೆಯುತ್ತಿದ್ದು, ವಿಮಾನ ನಿಲ್ದಾಣ ಮಾಡಿದರೆ ಅನುಕೂಲವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, 20 ಸಾವಿರ ಎಕರೆ ಜಾಗದಲ್ಲಿ ಏಷ್ಯಾದ
ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ
ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್ಶಿಪ್ ಬರುತ್ತಿದೆ. ಎಚ್ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಳು ಬರಲಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಮಾಡಿದರೆ ಉತ್ತಮ ಎಂಬುದನ್ನು ತಿಳಿಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ತುಮಕೂರು ಅಭಿವೃದ್ಧಿಗೆ ಬೇರೆಬೇರೆ ಹೊಸ ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದ್ದು ಗ್ರೇಟರ್ ಬೆಂಗಳೂರು ಎಂದು ಪರಿಗಣಿಸುವಂತೆ ಕೇಳಿಕೊಳ್ಳಲಾಗಿದೆ. ನೆಲಮಂಗಲ, ದಾಬಸ್ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರುವರೆಗೆ ಮೆಟ್ರೋ ರೈಲು ವಿಸ್ತರಣೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಮಕೂರನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.