ಬೆಳಗಾವಿ :
ಆರೈಕೆ ಮತ್ತು ರಕ್ಷಣೆಗೆ ಅವಶ್ಯಕತೆ ಇರುವ ಯಾವುದೇ ವ್ಯಕ್ತಿ ಸಂಘ ಸಂಸ್ಥೆಗಳಲ್ಲಿ ಮಕ್ಕಳನ್ನು ಇರಿಸಿಕೊಳ್ಳಲು ಬಾಲನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015 ನಿಯಮಗಳು 2016 ಹಾಗೂ ತಿದ್ದುಪಡಿ 2022 ರಡಿಯಲ್ಲಿ ಸೆಕ್ಷನ್ 41 ರ ಅನ್ವಯ ಕಡ್ಡಾಯವಾಗಿ ನೋಂದಣಿ ಮಾಡುವದು ಅವಶ್ಯವಿರುತ್ತದೆ.

ನೋಂದಣಿ ಇಲ್ಲದೇ ಮಕ್ಕಳನ್ನು ಅಭಿರಕ್ಷಣೆಯಲ್ಲಿ ಇಟ್ಟುಕೊಂಡಿದ್ದೇ ಆದರೆ ಕಾನೂನು ಬಾಹಿರ ಅಭಿರಕ್ಷಣೆ ಎಂದು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು/ಸಂಘ ಸಂಸ್ಥೆಗಳು ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆದು ಬಾಲನ್ಯಾಯ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ತಮ್ಮ ಸಂಸ್ಥೆಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ಬಂದಿರುತ್ತದೆ.

ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳು, ಮಠಗಳು, ಚರ್ಚಗಳು, ಮಸೀದಿಗಳು ಅದರಂತೆ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಮಕ್ಕಳನ್ನು ಮೂಲಭೂತ ಹಕ್ಕುಗಳಿಂದ ವಂಚನೆಗೊಳಪಡಿಸುವುದು ಕಂಡು ಬಂದಿರುತ್ತದೆ. ಅದರಂತೆ ಯಾರಾದರೂ ಮಕ್ಕಳ ಪಾಲನಾ ಸಂಸ್ಥೆ, ಮಕ್ಕಳ ಕುಠೀರ, ಅನಾಥ ಆಶ್ರಮ, ದೇವರ ಮನೆ, ಮಕ್ಕಳ ತಂಗುಧಾಮ ತೆರೆದು ಮಕ್ಕಳನ್ನು ಆರೈಕೆ ಮಾಡುತ್ತೇವೆ ಎಂಬ ಆಸಕ್ತಿಯನ್ನು ಹೊಂದಿದ್ದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ (ರೂಂ ನಂ-೨೦೪, ೨ನೆ ಮಹಡಿ, ಸುವರ್ಣ ವಿಧಾನಸೌಧ, ಬೆಳಗಾವಿ- ೮೦೭೩೯೭೨೯೨೯) ಮಾಹಿತಿಯನ್ನು ಪಡೆದು ಬಾಲನ್ಯಾಯ ಕಾಯ್ದೆಯಡಿಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕು.

ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸ್ಥಳಕ್ಕೆ ಭೇಟಿ ಮಾಡಿ ಮಕ್ಕಳ ಮೂಲಭೂತ ಸೌಕರ್ಯಗಳ ಕುರಿತು ಖಾತರಿ ಪಡಿಸಿಕೊಂಡ ನಂತರವೇ ಕಾನೂನಿನ ಪ್ರಕಾರ ಸದರಿ ಸಂಸ್ಥೆಯನ್ನು ನೋಂದಾಯಿಸಿ ಪ್ರಮಾಣಪತ್ರ ನೀಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಹೆಚ್ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.