Join The Telegram | Join The WhatsApp |
ಬೆಳಗಾವಿ :
ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೆರವಿಗೆ ಬರುವಂತೆ ಹಾಗೂ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರೆಂದು ವರ್ಗೀಕರಿಸದೆ ರಾಗಿ ಬೆಳೆದ ಎಲ್ಲಾ ರೈತರಿಂದ ಯಾವ ಮಿತಿಯಿಲ್ಲದೆ ರಾಗಿ ಖರೀದಿಸಲು ಕ್ರಮ ವಹಿಸುವಂತೆ ಆಗ್ರಹಿಸಿ ತಿಪಟೂರಿನ ಕಾಂಗ್ರೆಸ್ ಮುಖಂಡ ಸಿ. ಬಿ. ಶಶಿಧರ್ ಟೂಡಾ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬುಧವಾರ ಬೆಳಗಾವಿಗೆ ಆಗಮಿಸಿ ಸುವರ್ಣ ವಿಧಾನಸೌಧದೆದುರು ಪ್ರತಿಭಟನೆ ನಡೆಸುವ ಮೂಲಕ ಸರಕಾರದ ಗಮನ ಸೆಳೆದರು.
ತಿಪಟೂರು ಹಾಗು ಸುತ್ತಮುತ್ತಲು ಜಿಲ್ಲೆಯ ರೈತರು ತೆಂಗನ್ನು ಹೆಚ್ಚು ಬೆಳೆಯುತ್ತಾರೆ. ಇದರಲ್ಲಿ ತಿಪಟೂರು ತಾಲ್ಲೂಕಿನ ರೈತರಿಗೆ ಸಂಪೂರ್ಣವಾಗಿ ತೆಂಗು ಆರ್ಥಿಕ ಬೆಳೆ ಹಾಗೂ ಅದೇ ಜೀವನಾಧಾರವಾಗಿದೆ. ರೈತರು ಬಲಿತ ತೆಂಗಿನ ಕಾಯಿಯಿಂದ ವಿಶ್ವದಲ್ಲೇ ಅತೀ ವಿಶಿಷ್ಟವಾದ ಉಂಡೆ ಒಣ ಕೊಬ್ಬರಿ ತಯಾರಿಸುತ್ತಾರೆ. ಈ ರೀತಿ ನೈಸರ್ತಗೀಕವಾಗಿ ತಯಾರಿಸಿದ ಉಂಡೆ ಕೊಬ್ಬರಿಯನ್ನು ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಉಂಡೆ ಕೊಬ್ಬರಿಗೆ ಸಂಬಂಧಿಸಿದಂತೆ ತಿಪಟೂರಿನಲ್ಲಿ ಘೋಷಣೆಯಾದ ಟೆಂಡರ್ ಧಾರಣೆಯನ್ನೇ ಮೂಲಧಾರಣೆಯನ್ನಾಗಿ ರಾಜ್ಯಾದ್ಯಂತ ಪರಿಗಣಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಧಿಕ ಮಳೆಯಾಗಿ ಹಾಗೂ ಪ್ರಸ್ತುತ ಚಳಿಗಾಲ ಪ್ರಾರಂಭವಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ನೈಸರ್ಗಿಕವಾಗಿ 9 ತಿಂಗಳಲ್ಲಿ ತಯಾರಾಗುವ ಉಂಡೆ ಕೊಬ್ಬರಿಯು 14-15 ತಿಂಗಳಾದರೂ ತಯಾರಾಗದೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶದಿಂದ ಕೂಡಿರುತ್ತದೆ. ಶೇಖರಿಸಿದ ತೆಂಗಿನಕಾಯಿಯನ್ನು ಕೊಬ್ಬರಿಯನ್ನಾಗಿಸಲು ಇನ್ನಷ್ಟು ದಿನ ಶೇಖರಣೆ ಮುಂದುವರಿಸಿದರೆ ಪ್ರಸ್ತುತ ಕಟಾವು ಮಾಡಿದ ತೆಂಗಿನಕಾಯಿಯನ್ನು ಶೇಖರಿಸಲು ರೈತರ ಬಳಿ ಸಾಕಷ್ಟು ಅಟ್ಟಗಳ ಲಭ್ಯತೆ ಇರುವುದಿಲ್ಲ. ಆದಕಾರಣ ತೇವಾಂಶವಿರುವ ಕೊಬ್ಬರಿಯನ್ನೇ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಸರಕಾದ ಗಮನಕ್ಕೆ ತಂದರು.
2021 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ರೂ.16,730 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ರೂ.11,000 ನಿಗದಿಪಡಿಸಿದೆ. ಈ ನಿಗದಿತ ಅವೈಜ್ಞಾನಿಕ ಬೆಲೆಗೆ ರೈತರ ಹಿತದೃಷ್ಟಿಯಿಂದ ಆಕ್ಷೇಪಿಸಬೇಕಾದ ರಾಜ್ಯ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ತಿಪಟೂರು ಟೂಡಾ ಶಶಿಧರ್ ದೂರಿದರು.
ಕ್ವಿಂಟಾಲ್ ಉಂಡೆ ಕೊಬ್ಬರಿ ಈವರೆಗೂ ಮಾರುಕಟ್ಟೆಯಲ್ಲಿ ರೂ.17,000 ರಿಂದ 18,000 ಕ್ಕೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ರೂ. 11,500 ಮಾರಾಟವಾಗುತ್ತಿದ್ದು, ಇದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದಿಂದ ಗುಣಮಟ್ಟ ಕಳೆದುಕೊಂಡಿರುವ ಉಂಡೆ ಕೊಬ್ಬರಿಗೆ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಗೆ ರೂ. 3,000 ಪರಿಹಾರ ಮೊತ್ತವನ್ನು ಸಹಾಯಧನ ರೂಪದಲ್ಲಿ ಕೊಡಬೇಕು. ಇದರಿಂದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೊಂಚ ಮಟ್ಟಿಗಾದರೂ ಆಧಾರ ಸಿಗಲಿದೆ ಎಂದು ಟೂಡಾ ಶಶಿಧರ್ ಮನವಿ ಮಾಡಿದರು.
2013-14 ರಲ್ಲಿ ಕೊಬ್ಬರಿ ಬೆಲೆ ಕುಸಿತ ಕಂಡಾಗ ಅಂದಿನ ಕಾಂಗ್ರೆಸ್ ಸರ್ಕಾರ ಕೊಬ್ಬರಿ ಬೆಳೆಗಾರರ ಬೆನ್ನಿಗೆ ನಿಂತು ರೂ. 1,000 ಸಹಾಯಧನ ಘೋಷಿಸಿತ್ತು. ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆ ಜಾರಿಗೆ ತಂದ ನಂತರ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನ ಖರೀದಿಸುವ ವ್ಯಾಪಾರಸ್ಥರ ಸಂಖ್ಯೆ ತೀರ ಕ್ಷೀಣಿಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಮಾರುಕಟ್ಟೆಗಳು ನಶಿಸುತ್ತಿವೆ. ದೆಹಲಿಯ ರೈತ ಚಳವಳಿಯ ನಂತರ ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆಯನ್ನು ಹಿಂಪಡೆದರೂ, ರಾಜ್ಯದ ಈಗಿನ ರೈತ ವಿರೋಧಿ ಸರ್ಕಾರ ಹಳೆ ಕಾಯ್ದೆಯನ್ನು ಮತ್ತೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಹೀಗಾಗಿ ಉಂಡೆ ಕೊಬ್ಬರಿ ಬೆಳೆಗಾರರು ಕಂಗಾಲಾಗಿದ್ದಾರೆ, ಈ ಕೂಡಲೇ ಸರ್ಕಾರ ಬೆಳೆಗಾರರ ಬೆನ್ನೆಲುಬಾಗಿ ನಿಲ್ಲಬೇಕೆಂದು ತಿಪಟೂರು ಕಾಂಗ್ರೆಸ್ ಮುಖಂಡರಾದ ಟೂಡಾ ಶಶಿಧರ್ ಸರಕಾರಕ್ಕೆ ಆಗ್ರಹಿಸಿದರು.
ಇದೇ ವೇಳೆ ರಾಗಿ ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದಿಸಲು ಆಗ್ರಹಿಸಿರುವ ಟೂಡಾ ಶಶಿಧರ, ಸರಕಾರ ಪ್ರಸ್ತುತ ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರಿಂದ ಮಾತ್ರ ರಾಗಿ ಖರೀದಿಸುತ್ತಿದೆ. ರಾಗಿ ಬೆಳೆದ ಎಲ್ಲಾ ರೈತರಿಂದಲೂ ಸರಕಾರ ಯಾವುದೇ ಮಿತಿಯಿಲ್ಲದೇ ಬೇಳೆದ ಪೂರ್ಣ ಪ್ರಮಾಣದ ಉತ್ಪನ್ನವನ್ನು ಖರೀದಿಸಬೇಕೆಂದು ಎಂದು ಆಗ್ರಹಿಸಿದರು.
Join The Telegram | Join The WhatsApp |