ನವದೆಹಲಿ:
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ನೇಮಕ ಮಾಡಲಾಗಿದೆ. ಅವರು ಫೆಬ್ರುವರಿ 24ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅವರ ಅಧಿಕಾರ ಅವಧಿ ಒಂದು ತಿಂಗಳಿಗೂ ಮೊದಲೇ ಕೊನೆಗೊಳ್ಳಲಿದೆ.
ನ್ಯಾಯಮೂರ್ತಿ ಕುಮಾರ್ ಅವರು ಈಗ ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಪ್ರಸನ್ನ ಬಿ. ವರಾಳೆ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಈಚೆಗೆ ಪದೋನ್ನತಿ ಪಡೆದಿದ್ದಾರೆ.
ನ್ಯಾಯಮೂರ್ತಿ ಕುಮಾರ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್ನ ಕೊಲಿಜಿಯಂ ಜನವರಿ 19ರಂದು ಶಿಫಾರಸು ಮಾಡಿತ್ತು. ಕಡಿಮೆ ಸೇವಾವಧಿ ಹೊಂದಿದವರನ್ನು ಹೈಕೋರ್ಟ್ಗಳಿಗೆ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಮಾಡಿದ ನಿದರ್ಶನಗಳು ಈ ಹಿಂದೆಯೂ ಇವೆ.