ಭುವನೇಶ್ವರ: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಕೂಲಂಕಷವಾಗಿ ತಪಾಸಣೆ ಕೈಗೊಳ್ಳಲು ಆಡಳಿತ ಮಂಡಳಿಯು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಒಡಿಶಾ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ದೇವಾಲಯದ ಖಜಾನೆಯೊಳಗೆ ಹಲವು ರಹಸ್ಯ ಖಜಾನೆಗಳು ಇರುವ ಸಾಧ್ಯತೆಗಳಿದ್ದು, ಇದು ದೇವಾಲಯದ ಐತಿಹಾಸಿಕ ಮಾಹಿತಿಗಳ ಸಂಗ್ರಹಕ್ಕೆ ಇದು ಸಾಧ್ಯವಾಗಲಿದೆ ಎಂಬ ಅಂಶವನ್ನು ತಮ್ಮ ಶಿಫಾರಸಿನಲ್ಲಿ ಸಮಿತಿ ಹೇಳಿದೆ.

ನ್ಯಾ. ಬಿಸ್ವನಾಥ್ ರತ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಸಮೀಕ್ಷೆಯ ಮೇಲುಸ್ತುವಾರಿ ವಹಿಸಿದೆ. ಸೋಮವಾರ ನಡೆದ ಸಭೆಯ ನಂತರ ಈ ಶಿಫಾರಸನ್ನು ಮಾಡಿದೆ.

‘ರತ್ನ ಭಂಡಾರಕ್ಕೆ ಯಾವುದೇ ಹಾನಿ ಮಾಡದೆ, ಅದರೊಳಗಿರುವ ಇನ್ನಿತರ ಸತ್ಯಾಸತ್ಯತೆಗಳನ್ನು ಶೋಧಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವಿದೆ. ಇದನ್ನೇ ದೇವಸ್ಥಾನ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದರಿಂದ ಈವರೆಗೂ ಉಳಿದಿರುವ ಹಲವು ರಹಸ್ಯಗಳು ಬಯಲಾಗಲಿವೆ’ ಎಂದು ಸಮಿತಿ ಹೇಳಿದೆ.

‘ಈ ಶೋಧ ಕಾರ್ಯದಲ್ಲಿ ಇನ್ನೂ ಹೆಚ್ಚಿನ ಭಂಡಾರಗಳು ಪತ್ತೆಯಾದಲ್ಲಿ, ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಜತೆಗೆ ಅವುಗಳ ದುರಸ್ತಿ ಹಾಗೂ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ. ಭಂಡಾರದೊಳಗಿರುವ ಕೆಲವೊಂದು ಖಾಲಿ ಅರಾಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಳಾಂತರಿಸಲು ಸಮಿತಿ ನಿರ್ಧರಿಸಿದೆ. ಇವುಗಳನ್ನು ಇಡಲು ಸೂಕ್ತ ಜಾಗವನ್ನು ಗುರುತಿಸುವಂತೆ ಶ್ರೀ ಜಗನ್ನಾಥ ದೇವಾಲಯ ಆಳಿತ ಮಂಡಳಿ (SJTA)ಗೆ ನಿರ್ದೇಶಿಸಲಾಗಿದೆ’ ಎಂದು ನ್ಯಾ. ರತ್ ವಿವರಿಸಿದ್ದಾರೆ.

‘ರತ್ನ ಭಂಡಾರ ವಿಷಯದಲ್ಲಿ ನಿರ್ದಿಷ್ಟ ಮಾನದಂಡಗಳನ್ನು ರಚಿಸಬೇಕು. ಈ ಹಿಂದೆ ಇಂಥ ವಿಷಯಗಳನ್ನು ಜಾರಿಗೆ ತಂದಿರಲಿಲ್ಲ. ಈ ಕಾರ್ಯದಿಂದ ದೇವಾಲಯದ ನಿತ್ಯದ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ಧಕ್ಕೆ ಆಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆಯುವ ಪ್ರಕ್ರಿಯೆಯನ್ನು ಒಡಿಶಾ ಸರ್ಕಾರ ಇತ್ತೀಚೆಗೆ ಆರಂಭಿಸಿತ್ತು. ರತ್ನ ಭಂಡಾರದ ಹೊರಗೆ ಹಾಗೂ ಒಳಗೆ ಶೋಧ ಕಾರ್ಯ ನಡೆಸಲು ಸಮಿತಿ ರಚಿಸಲಾಗಿತ್ತು. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಬೆಲೆಬಾಳುವ ವಸ್ತುಗಳನ್ನು ಸೂಕ್ತ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಜುಲೈ 14ರಿಂದ 18ರವರೆಗೆ ನಡೆಯಿತು. ಒಮ್ಮೆ ಈ ಕಾರ್ಯ ಪೂರ್ಣಗೊಂಡ ನಂತರ ಮೂಲ ಸ್ಥಳಕ್ಕೆ ರತ್ನ ಭಂಡಾರದಲ್ಲಿದ್ದ ವಸ್ತುಗಳನ್ನು ಇಡಲಾಗುವುದು. ಇವುಗಳನ್ನು ನ್ಯಾ. ರತ್ ಅವರ ಮೇಲುಸ್ತುವಾರಿಯಲ್ಲಿ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.