ಪುರಿ: ಶತಮಾನಗಳಿಂದ ತೆರೆಯದೇ ಇಟ್ಟಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985 ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನ ಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ.

ಈ ರತ್ನಭಂಡಾರದಲ್ಲಿರುವ ಸಂಪತ್ತಿನಿಂದ ಇಡೀ ದೇಶಕ್ಕೆ ಎರಡು ವರ್ಷಗಳ ಕಾಲ ಉಚಿತ ಊಟ ಒದಗಿಸಬಹುದು ಎಂದು ಹೇಳಲಾಗಿದೆ. ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು. 2018ರಲ್ಲಿ ಇದರ ತನಿಖೆ ನಡೆಸುವಂತೆ ನ್ಯಾಯಾಲಯ ಭಾರತದ ಪುರಾತತ್ವ ಇಲಾಖೆಗೆ ಆದೇಶಿಸಿದ್ದಾಗ ಭಂಡಾರದ ಬೀಗದಕೈ ಕಾಣೆಯಾಗಿತ್ತು. 2011ರಲ್ಲಿ ಕೇರಳದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಇದೇ ಮಾದರಿಯಲ್ಲಿ ನೆಲಮಾಳಿಗೆಯಲ್ಲಿದ್ದ 1 ಲಕ್ಷ ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.