ಪುತ್ತೂರು: ಪುತ್ತೂರಿನ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ವಿಚಾರದಲ್ಲಿ ವೇಗತೆ ಹೆಚ್ಚಿಸುವುದು ಮತ್ತು ೪೫ ದಿನದೊಳಗೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ಶೀಘ್ರವೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಹಕಾರ ನೀಡುವಂತೆ ವಿನಂತಿಸಿದರು.

ಬುಧವಾರ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಪಿ ಸಿ ಜಾಫರ್ (ಬಜೆಟ್) ಕಾರ್ಯದರ್ಶಿ ಡಾ. ರಿತೇಶ್ ಸಿಂಗ್ ಡಾ. ವಿಶಾಲ್ ಅವರನ್ನು ಭೇಟಿಯಾದ ಶಾಸಕರು ಪುತ್ತೂರಿನ ಸರಕಾರಿ ಮೆಡಿಕಲ್ ಕಾಲೇಜಿಗೆ ಸಂಬಂದಿಸಿದ ಪ್ರಕ್ರಿಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮೆಡಿಕಲ್ ಕಾಲೇಜು ಕಾಮಗಾರಿ ಪ್ರಾರಂಭ ವಿಚಾರದಲ್ಲಿ ಯಾವುದೇ ವಿಳಂಬವಾಗಬಾರದು. ಈಗಾಗಲೇ ಜಾಗದ ಸರ್ವೆ ನಡೆಸಲಾಗಿದೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

 

೪೫ ದಿನದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ

೪೫ ದಿನದೊಳಗೆ ೨೫೦ ಬೆಡ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿ ಕಾಮಗಾರಿಗೆ ವೇಗ ನಿಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು. ಟೆಂಡರ್ ಪ್ರಕ್ರಿಯೆ ವಿಳಂಬವಾದಲ್ಲಿ ಕಾಮಗಾರಿಯ ವೇಗತೆ ಕಡಿಮೆಯಾಗುತ್ತದೆ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಉದ್ಘಾಟನೆಯ ವೇಳೆ ಪುತ್ತೂರಿನ ಮೆಡಿಕಲ್ ಕಾಲೇಜು ವಿಷಯವನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಆದಷ್ಟು ಶೀಘ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡುವಲ್ಲಿ ಸಹಕಾರ ನೀಡಬೇಕು ಎಂದು ಶಾಸಕರು ವಿನಂತಿಸಿದರು. ಬನ್ನೂರಿನಲ್ಲಿ ನಿಗಧಿಮಾಡಿದ ಜಾಗದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

 

 

ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕ್ರಿಯೆ ವೇಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಬುಧವಾರ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಟೆಂಡರ್ ಪ್ರಕ್ರಿಯೆ ಮ್ತತು ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂದಿಸಿದಂತೆ ಮಾತುಕತೆ ನಡೆದಿದೆ. ೪೫ ದಿನದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಬನ್ನೂರಿನ ನಿಗದಿತ ಜಾಗದಲ್ಲೇ ಕಾಲೇಜು ನಿರ್ಮಾಣವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ವೈದ್ಯಕೀಯ ಸಚಿವರ ಜೊತೆಯೂ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಪ್ರಕ್ರಿಯೆಗಳಿಗೂ ಚಾಲನೆ ದೊರೆಯಲಿದೆ. ಪ್ರಾರಂಭದಲ್ಲಿ ೨೫೦ ಬೆಡ್‌ನ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯಲಿದೆ-ಅಶೋಕ್ ರೈ, ಶಾಸಕರು ಪುತ್ತೂರು

ಪುತ್ತೂರು ವಿಧಾನಸಭಾ ಕ್ಷೇತ್ರ ತಡೆಗೋಡೆ ಕಾಮಗಾರಿಗೆ ೨.೫೦ ಕೋಟಿ ಮಂಜೂರಾತಿಗೆ

ಸಣ್ಣ ನೀರಾವರಿ ಸಚಿವ ಬೋಸರಾಜು ಶಿಫಾರಸ್ಸು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ತಡೆಗೋಡೆ ಕಾಮಗಾರಿಗೆ ೨.೫೦ ಕೋಟಿ ಮಂಜೂರಾತಿಗೆ ಸಣ್ಣ ನೀರಾವರಿ ಸಚಿವ ಬೋಸರಾಜು ಅವರು ಶಿಫಾರಸ್ಸು ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಪಾಣಾಜೆ ಗ್ರಾಮದ ನೆಲ್ಲೆತ್ತಿಮಾರು ಎಂಬಲ್ಲಿ ತಡೆಗೋಡೆ ಕಾಮಗಾರಿಗೆ ೫೦ ಲಕ್ಷ ಹಾಗೂ ಒಳಮೊಗ್ರು ಗ್ರಾಮದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬಳಿ ತಡೆ ಗೋಡೆ ಕಾಮಗಾರಿ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ೨ ಕೋಟಿ ಅನುದಾನವನ್ನು ಒದಗಿಸುವಂತೆ ಶಾಸಕ ಅಶೋಕ್ ರೈ ಅವರು ಸಚಿವರಲ್ಲಿ ಮನವಿ ಮಾಡಿದ್ದು ಮನವಿಯನ್ನು ಪುರಸ್ಕರಿಸಿದ ಸಚಿವರು ಎರಡೂ ತಡೆ ಗೋಡೆ ಕಾಮಗಾರಿಗೆ ಶಿಫಾರಸ್ಸು ಮಾಡಿದ್ದಾರೆ. ಬುಧವಾರ ಶಾಸಕ ಅಶೋಕ್ ರೈ ಸವರನ್ನು ಭೇಟಿಯಾಗಿದ್ದರು. ನಿಯೋಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕುಂಬ್ರ ಮರ್ಕಝ್ ಮಹಿಳಾ ಕಾಲೇಜು ಅಧ್ಯಕ್ಷ ಅಬ್ದುಲ್ ರಹಿಮಾನ್ ಅರಿಯಡ್ಕ, ಉಪಾಧ್ಯಕ್ಷ ಅಬ್ದುಲ್ ರಶೀಧ್ ಝೈನಿ, ಕಾರ್ಯದರ್ಶಿ ರಶೀದ್ ಸಂಪ್ಯ ಸದಸ್ಯ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು.