ದೆಹಲಿ:
ಕತಾರ್‌ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ಶಿಕ್ಷೆಯನ್ನು ಕತಾರ್ ನ್ಯಾಯಾಲಯವು ತಗ್ಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತಿಳಿಸಿದೆ.
‘ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಭಾರತದ ಮೇಲ್ಮನವಿಗೆ ಸಂಬಂಧಿಸಿದಂತೆ ಕತಾರ್‌ನ ನ್ಯಾಯಾಲಯವು ಇಂದು ತೀರ್ಪು ನೀಡಿದ್ದು, ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಶಿಕ್ಷೆಯ ಮಾರ್ಪಾಡು ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ.
ಬೇಹುಗಾರಿಕೆ ಆರೋಪದಡಿ ಭಾರತ ಮೂಲದ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಬಂಧಿಸಿ ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು.
ದೋಹಾ ಮೂಲದ ದಹ್ರಾ ಗ್ಲೋಬಲ್ ಕಂಪನಿಯ ನೌಕರರಾಗಿದ್ದ ಭಾರತೀಯರನ್ನು ಆಗಸ್ಟ್ 2022ರಲ್ಲಿ ವಶಕ್ಕೆ ಪಡೆಯಲಾಗಿತ್ತು. ಅವರ ಮೇಲಿನ ಆರೋಪಗಳು ಏನು ಎಂಬುದನ್ನು ಕತಾರ್ ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಕಳೆದ ತಿಂಗಳು ಭಾರತ ಸರ್ಕಾರವು ಕತಾರ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.
‘ತೀರ್ಪು ಪ್ರಕಟಿಸುವ ವೇಳೆ ಶಿಕ್ಷೆಗೀಡಾಗಿರುವ ಮಾಜಿ ಅಧಿಕಾರಿಗಳ ಕುಟುಂಬ ಸದಸ್ಯರ ಜೊತೆ ನಮ್ಮ ರಾಜತಾಂತ್ರಿಕರು ಮತ್ತು ಇತರೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಈ ವಿಷಯದಲ್ಲಿ ನಾವು ಮೊದಲಿನಿಂದಲೂ ಅವರ ಪರ ನಿಂತಿದ್ದೇವೆ. ನಮ್ಮ ರಾಜತಾಂತ್ರಿಕ ಮತ್ತು ಕಾನೂನು ನೆರವನ್ನು ಮುಂದುವರಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತೀರ್ಪಿನ ಸಂಪೂರ್ಣ ಮಾಹಿತಿಗಾಗಿ ಕಾಯುತ್ತಿದ್ದೇವೆ. ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತಂತೆ ಚರ್ಚಿಸಲು ಕಾನೂನು ತಂಡ ಮತ್ತು ಶಿಕ್ಷೆಗೊಳಗಾದವರ ಕುಟುಂಬದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದೂ ತಿಳಿಸಲಾಗಿದೆ.
ನಾವು ಮುಂದೆಯೂ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ರಾಜತಾಂತ್ರಿಕ ಹಾಗೂ ಕಾನೂನು ನೆರವು ನೀಡಲಾಗುವುದು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಎಂಟು ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಾದ ಕೂಡಲೇ ಭಾರತ ಸರ್ಕಾರವು ಅಧಿಕಾರಿಗಳ ನೆರವಿಗೆ ಧಾವಿಸಿತ್ತು. ಅಲ್ಲದೆ, ಭಾರತವು ಕತಾರ್‌ಗೆ ಅಧಿಕಾರಿಗಳಿಗೆ ರಾಯಭಾರ ಸಂಪರ್ಕ ಕೊಡಿ ಎಂದು ಮನವಿ ಮಾಡಿತ್ತು. ಅದಕ್ಕೆ ಕತಾರ್ ಒಪ್ಪಿತ್ತು. ಈಗ ಶಿಕ್ಷೆಯ ಪ್ರಮಾಣವೂ ಕಡಿಮೆಯಾಗಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿರಬಹುದು ಎಂದು ಹೇಳಲಾಗುತ್ತಿದೆ.
‘ಈ ಪ್ರಕ್ರಿಯೆಯು ಅತ್ಯಂತ ಸೂಕ್ಷ್ಮ ಮತ್ತು ಗೋಪ್ಯತೆಯಿಂದ ಕೂಡಿದ್ದಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಂಇಎ ತಿಳಿಸಿದೆ.