ಕಾನನದ ನಡುವಲ್ಲಿ ಅದ್ಬುತ ವಾಸ್ತುಶಿಲ್ಪ ಚತುರ್ಮುಖ ಬಸದಿ
@ ಉಮೇಶ ಮುಂಡಳ್ಳಿ ಭಟ್ಕಳ
ಶಿವಮೊಗ್ಗದ ದಟ್ಟಡವಿಯ ಗರ್ಭ ಅಂಬುತೀರ್ಥದಲ್ಲಿ ಹುಟ್ಟಿ ಶರಾವತಿಯಾಗಿ ಜೋಗ ಜಲಪಾತವಾಗಿ ಭೋರ್ಗರೆಯುತ ಗೇರುಸೊಪ್ಪೆಯ ಸುತ್ತುವರಿದು ಹರಿಯುತ್ತಿದೆ ಶರಾವತಿ. ಒಂದು ಬದಿ ಭೋರ್ಗರೆಯುವ ಕಡಲು, ಇನ್ನೊಂದು ಕಡೆ ದಟ್ಟವಾದ ಘಟ್ಟ ಸಾಲು, ನಡುವೆ ಸರಾಗವಾಗಿ ಹರಿವ ಹೊಳೆ ಸಾಲು. ಇಂತಹ ಪ್ರಕೃತಿಯ ರಮ್ಯತೆಯ ಜಾಗದಲ್ಲಿದ್ದ ತಾಣ ಗೇರುಸೊಪ್ಪ. ಇದರ ಹಿಂದಿನ ಹೆಸರು ಭಲ್ಲಾತಕೀಪುರ (ಭಲ್ಲಾತಕೀ ಎಂದರೆ ಗೇರು ಮರ!). ಸಂದಿಗ್ಧ ಕಾಲಘಟ್ಟದಲ್ಲಿ ರಾಣಿಯಾಗಿ, ಪರಂಗಿಗಳಾದ ಪೋರ್ಚುಗೀಸರಿಗೂ ಜಗ್ಗದೆ ರಾಜ್ಯ ಕಟ್ಟಿದವಳು ಗೇರುಸೊಪ್ಪದ ಮೆಣಸಿನ ಕಾಳಿನ ರಾಣಿ, ರಾಣಿ ಚೆನ್ನಬೈರಾದೇವಿ.
ಆಗ ಗೇರುಸೊಪ್ಪ ಸಾಮ್ರಾಜ್ಯ ಹೊನ್ನಾವರದಿಂದ ಕುಂದಾಪುರದವರೆಗೆ ಹರಡಿಕೊಂಡಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಭಟ್ಕಳದ ಇಂದಿನ ಹಾಡುವಳ್ಳಿ ಅಥವಾ ಸಂಗೀತಪುರ ಕೂಡ ರಾಣಿಯ ಆಳ್ವಿಕೆಗೆ ಒಳಪಟ್ಟ ಪ್ರಮುಖ ಸ್ಥಳವಾಗಿತ್ತು.
ಗೇರುಸೊಪ್ಪ ವೃತ್ತದಿಂದ ಆಣೆಕಟ್ಟು ಮಾರ್ಗವಾಗಿ ಸುಮಾರು ಏಳೆಂಟು ಕಿ.ಮೀ. ಕ್ರಮಿಸಬೇಕು. ದಟ್ಟ ಕಾಡಿನ ನಡುವೆ ಕಾನನ ಪ್ರವೇಶಮಾಡುತ್ತಿದಂತೆ ನೂರಿನ್ನೂರು ಎಕರೆಗಳಲ್ಲಿ ಹರವಿಕೊಂಡ ನಾಲ್ಕೈದು ಬಸದಿ ಸಮುಚ್ಚಯವೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. (ಇಡಗುಂಜಿ, ಬಳ್ಕೂರು ಮಾಗೋಡು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದಾಗಿದೆ.)
ಎಂತಹ ಕೆತ್ತನೆಗಳು! ಪ್ರತಿ ಮೂರ್ತಿಯೂ ಸುಮನೋಹರ! ಪಾರ್ಶ್ವನಾಥನ ಬಸದಿಯೊಳಗಿನ ಪಾರ್ಶ್ವನಾಥ ಮೂರ್ತಿಯ ಕೆತ್ತನೆಯಂತೂ ಅಚ್ಚಳಿಯದೆ ನಮ್ಮ ನೆನಪಿನಲ್ಲುಳಿಯುವಂಥದ್ದು. ಜೊತೆಗೆ ಪ್ರಭಾವಿ ಜ್ವಾಲ ಮಾಲಿನಿ ದೇವಿಯ ಉಪಸ್ಥಿತಿ. ಎಲ್ಲಕ್ಕೂ ಕಲಶವಿಟ್ಟಂತೆ ಕಾಣುವುದು ಚರ್ತುಮುಖ ಬಸದಿ.
ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಎತ್ತರದ ಪೀಠದ ಮೇಲೆ ಅಲಂಕೃತವಾದ ಸುಮಾರು ಹದಿನಾರನೆಯ ಶತಮಾನದ ಬಸದಿ ಅದು. ಚತುರ್ಮುಖ ಬಸದಿಯುದ್ದಕ್ಕೂ ಸುಮಾರು ನೂರು ಅಡಿ ಅಗಲದ ರಾಜಬೀದಿ ಇಂದು ಪಾಳುಬಿದ್ದಿದ್ದರೂ ಅವು ಅಂದಿನ ವೈಭವಕ್ಕೆ ಸಾಕ್ಷಿ ನುಡಿಯುತ್ತೆ.
ಬಸದಿಗೆ ನಾಲ್ಕು ಮುಖದ್ವಾರಗಳು. ಯಾವ ದ್ವಾರದಲ್ಲಿಯೂ ಕಿಂಚಿತ್ತೂ ವ್ಯತ್ಯಾಸ ಕಾಣಲು ಸಾಧ್ಯವಿಲ್ಲ. ನಾಲ್ಕು ದ್ವಾರಕ್ಕೂ ಮುಖಮಾಡಿ ಕುಳಿತ ವಿಶಿಷ್ಟ ಕಲಾ ನೈಪುಣ್ಯದಿಂದ ಮಿರುಗುವ ಆದಿನಾಥ, ಸಂಭವನಾಥ, ಅಜಿತನಾಥ ಮತ್ತು ಅಭಿನಂದನಾಥ ಮೂರ್ತಿಗಳು.
ಹೊರ ಗೋಡೆಯ ಮೇಲೆಲ್ಲಾ ಸುಂದರ ಕಿಟಕಿಗಳು, ಜಾಲಾಂದ್ರ. ಕಿಟಕಿಗಳ ಮೇಲೆ ಹರಿವ ಸರ್ಪದ ಕೆತ್ತನೆ. ಕಿಟಕಿಯ ಮೇಲಿನಿಂದ ಇಣುಕುವ ಮಂಗನ ಕೆತ್ತನೆ ಅತ್ಯದ್ಭುತ.
ಉತ್ತರ ದಿಕ್ಕಿನ ರಾಣಿ ಆಗಮನದ ಗಜ ದ್ವಾರದ ಪಕ್ಕದಲ್ಲೇ ಮೀನಿನ ಕೆತ್ತನೆಯಿಂದ ಅಲಂಕೃತವಾದ ಗೋಡೆ. ಒಳಗಿನ ಕಂಬಗಳ ಕೆತ್ತನೆಯೂ ಅತ್ಯದ್ಭುತ. ರಾಣಿ ಚೆನ್ನಬೈರಾದೇವಿಯ ಕಾಲದ ಈ ಸುಂದರ ಬಸದಿಯ ಹೊರ ಪೌಳಿಯ ಮೇಲ್ಚಾವಣಿ ಕೆಲಸಗಳು ಮಾತ್ರ ಇನ್ನೂ ಹಾಗೆಯೇ ಬಾಕಿ ಉಳಿದಂತಿದೆ.
ರಾಣಿ ತನ್ನ ಕೊನೆಯ ದಿನಗಳನ್ನು ಸೆರೆಮನೆಯಲ್ಲಿ ಕಳೆದದ್ದು ಇದರ ಬಾಕಿಗೆ ಕಾರಣ ಇರಬಹುದು ಅನ್ನಿಸುತ್ತದೆ.
ಬಸದಿಯ ಸುತ್ತಲಿನ ಪೌಳಿ ಮಾತ್ರ ಸಂಪೂರ್ಣ ನಾಶವಾಗಿದೆ. ಬಸದಿಯ ಹೊರ ಭಾಗದಲ್ಲಿ ಎರಡು ಬಾವಿಗಳು, ವಿವಿಧ ದೇವರುಗಳ ಮೂರ್ತಿಗಳು, ಶಿಲ್ಪಗಳು, ಜಟ್ಟಿಗನ ಕಲ್ಲು ಅಲ್ಲಲ್ಲಿ ಅನಾಥವಾಗಿ ಬಿದ್ದಿವೆ.
ಸುತ್ತಲೂ ಹಬ್ಬಿದ ಕಾಡಿನಲ್ಲಿ 10,000ಕ್ಕೂ ಹೆಚ್ಚು ಬಾವಿಗಳು ಇವೆ ಎಂದು ಸ್ಥಳಿಯರು ಹೇಳುತ್ತಾರೆ. ಇವೆಲ್ಲಾ ಕಾಳುಮೆಣಸಿನ ವ್ಯವಹಾರವನ್ನು ನೆನೆಸುವ ಬಾವಿಗಳು. ಜೊತೆಗೆ ಅನೇಕ ಪಾಳು ಮಂಟಪಗಳು ಅಲ್ಲಲ್ಲಿ ತಮ್ಮ ಕತೆಯನ್ನು ಕೇಳಿ ಎನ್ನುವಂತೆ ಭಾಸವಾಗುತ್ತದೆ.
ವಿಜಯನಗರದ ಹಂಪಿಯಂತೆ ವೈಭವಪೂರ್ಣವಾಗಿ ಆಳ್ವಿಕೆ ಮಾಡಿದ ಕರಿ ಮೆಣಸಿನ ರಾಣಿಯ ಉಲ್ಲೇಖಗಳು ಇಟಲಿಯ ಪ್ರವಾಸಿಗ ‘ಪೆಟ್ರೊ ಡೆಲವೆಲ್ಲನ’ ಡೈರಿ ಸಾರಿ ಹೇಳುತ್ತದೆ. ಸಂಶೋಧಕರಿಗಂತೂ ಈ ಬೀಡು ಅತ್ಯಂತ ಉಪಯುಕ್ತ ಹಾಗೂ ಖುಷಿಕೊಡುವಂತಹ ಸ್ಥಳ.
ಕೆಲಸದ ಬಿಡುವಿಲ್ಲದ ಒತ್ತಡ ಅನೇಕ ಓಡಾಟ ತಾಪತ್ರಯಗಳ ನಡುವಲ್ಲಿಯೇ ಸಿಕ್ಕ ಸಮಯದಲ್ಲಿಯೇ ನಾನು ಮತ್ತೆ ಈ ಸುಂದರ ತಾಣಕ್ಕೆ ಭೇಟಿ ಮಾಡಿದೆ. ಹಾಗೆ ಅನೇಕ ಒತ್ತಡ ಜಂಜಾಟಗಳಿಂದ ಬಿಡುವು ಮಾಡಿಕೊಂಡು ಈ ಪಶ್ಚಿಮ ಘಟ್ಟದ ತಪ್ಪಲಲ್ಲಿ ಒಂದೆರಡು ದಿನ ಬಿಡುವು ಮಾಡಿಕೊಂಡು ಬಂದರೆ ನಿಮಗೂ ಮನಸ್ಸಿಗೆ ನಿರಾಳವಾಗಿ ಆಹ್ಲಾದಕರ ಆನಂದವಾಗುವುದರಲ್ಲಿ ಎರಡು ಮಾತಿಲ್ಲ.
ಹೇಗೆ ಹೋಗುವುದು?
ಹೊನ್ನಾವರದಿಂದ ಚರ್ತುಮುಖ ಬಸದಿಯ ಕಡೆಗೆ ಹೊರಡಲು ಎರಡು ಮಾರ್ಗಗಳಿವೆ. ಮೊದಲ ದಾರಿ ಗೇರುಸೊಪ್ಪೆಯ ಮೂಲಕ, ಎರಡನೆಯದ್ದು ಇಡುಗುಂಜಿಯ ಮೂಲಕ. ಇಡಗುಂಜಿಯಿಂದ ನಗರಬಸ್ತಿಕೇರಿ ಮೂಲಕ 32 ಕಿ.ಮೀ. ಕ್ರಮಿಸಿದರೆ ಚತುರ್ಮುಖ ಬಸದಿ. ಗೇರುಸೊಪ್ಪ ಮಾರ್ಗವಾಗಿ ಕೇವಲ 7 ಕಿ.ಮೀ.ಮಾತ್ರ.
ವಸತಿ ವ್ಯವಸ್ಥೆ
ದೂರದಿಂದ ಬರುವವರು ಸಮೀಪದ ಬಂಗಾರಮಕ್ಕಿ ವಿರಾಂಜನೆಯ ದೇವಾಲಯವನ್ನು ಭೇಟಿ ಮಾಡಿ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ. ಇಲ್ಲವೆ ಸಮೀಪದ ಸಿಂಗಳಿಕ ಇಕೋ ಪಾರ್ಕನಲ್ಲಿಯೂ ವಸತಿ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಮತ್ತೇಕೆ ತಡ. ಬನ್ನಿ, ಈ ಸುಂದರ ಪ್ರಕೃತಿ ತಾಣಕ್ಕೆ.
(ಉಲ್ಲೇಖ ಸಹಾಯ ‘ಮಹಾ ಮಂಡಲೇಶ್ವರಿ ರಾಣಿ ಚೆನ್ನಾ ಬೈರಾದೇವಿ’ – ಕಮಲಾ ಹಂಪನಾ. )