Join The Telegram | Join The WhatsApp |
ಹಾವೇರಿ :
ಬೆಳಗಾವಿಯನ್ನು ಕರ್ನಾಟಕದ ಉಪ ರಾಜಧಾನಿಯಾಗಿ ಮಾಡಬೇಕು ಎಂದು ಸಾಹಿತಿ ಸ.ರಘುನಾಥ ಒತ್ತಾಯಿಸಿದ್ದಾರೆ. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು ಗೋಷ್ಠಿಯಲ್ಲಿ ಗಡಿಯಲ್ಲಿ ಭಾಷೆ- ಸೌಹಾರ್ದ ಸಾಧ್ಯತೆಗಳು ವಿಷಯ ಕುರಿತು ಮಾತನಾಡಿದರು. ಭಾಷೆ ಹಾಗೂ ಸಂಸ್ಕೃತಿ ಕುರಿತು ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡ ಗಡಿ ಒಳಗಿನ ತನ್ನ ತನ್ನತನ ಕಳೆದುಕೊಳ್ಳುವಂತೆ ಗಡಿಯಾಚೆಗಿರುವ ಕನ್ನಡ ತನ್ನತನ ಕಳೆದುಕೊಳ್ಳುತ್ತಿದೆ ಎಂದರು.
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ಸರಿಯಲ್ಲ ಎಂದು ಹೇಳಿದರು. ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡ ಮಾತನಾಡಿ, ಕಾಸರಗೋಡು, ಬೆಳಗಾವಿ ಸಮಸ್ಯೆ ತೆರೆದೂರಿದೆ. ಭಾಷೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ವರ್ಗೀಕರಣ ಆಗಿಲ್ಲ. ಹೀಗಾಗಿ ಬೆಳಗಾವಿ ಮತ್ತು ಕಾಸರಗೋಡು ಸಮಸ್ಯೆ ಉಂಟಾಗಿದೆ. ಬೆಳಗಾವಿ ಗಡಿಯಂಚಿನಲ್ಲಿ ಸಂಚರಿಸಿದ್ದೇನೆ. ಶೇ.90 ರಷ್ಟು ಕನ್ನಡಿಗರೇ ಇದ್ದಾರೆ. ಅವರೆಲ್ಲ ರಾಜ್ಯಕ್ಕೆ ಬರುವ ಬಯಕೆ ಹೊಂದಿದ್ದಾರೆ ಎಂದು ಹೇಳಿದರು.
ಅಕ್ಕಲಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಕ್ಕಲಕೋಟೆ ಭಾಗದಲ್ಲಿ ಶೇಕಡಾ 90 ರಷ್ಟು ಜನ ಕನ್ನಡವನ್ನೇ ಆಡು ಭಾಷೆ-ವ್ಯವಹಾರಿಕ ಭಾಷೆಯಾಗಿ ಬಳಸುತ್ತಾರೆ. ಮಹಾರಾಷ್ಟ್ರದವರು ಬೆಳಗಾವಿ ಕೇಳಿದಂತೆ ಎಲ್ಲಾ ಪ್ರದೇಶಗಳನ್ನು ಕೇಳುತ್ತಾರೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
Join The Telegram | Join The WhatsApp |