ಮಂಗಳೂರು : ತುಳುನಾಡಿನ ಜನತೆ ಸ್ವಾಮಿ ಕೊರಗಜ್ಜನನ್ನು ಇನ್ನಿಲ್ಲದಂತೆ ನಂಬುತ್ತಾರೆ. ಅದರಲ್ಲೂ ದೂರದ ಮುಂಬೈ, ಬೆಂಗಳೂರು ಸೇರಿದಂತೆ ಪರ ಊರಿಗೆ ಹೋದ ಕರಾವಳಿ ಜನತೆ ಎಂದಿಗೂ ತಮ್ಮ ದೈವ-ದೇವರನ್ನು ಮರೆಯದಿರುವುದು ಇಂದಿನ ಆಧುನಿಕ ಯುಗದಲ್ಲೂ ವಿಶೇಷ.
ಅದರಂತೆ ಯಾವುದೇ ಕೆಲಸ ಮಾಡುವುದಿದ್ದರೆ ತಮ್ಮ ದೈವ-ದೇವರನ್ನು ನೆನೆದು ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಶುಭ ಕೆಲಸ ಆರಂಭಿಸುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ರೂಢಿಯಾಗಿದೆ. ಜುಲೈ 14 ರಂದು
ಕ್ರಿಕೆಟ್ ತಾರೆ ಕೆ.ಎಲ್. ರಾಹುಲ್ ದಂಪತಿ ಮಂಗಳೂರಿನ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಾಗೂ ಇನ್ನೊಂದು ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದರು. ನಂತರ ಮುಂಬೈಗೆ ತೆರಳಿದ ಅವರು ಜುಲೈ 15 ರಂದು ಹೊಸ ಮನೆಯನ್ನು ನೋಂದಣಿ ಮಾಡಿಕೊಂಡಿದ್ದರು. ಕರಾವಳಿ ಮೂಲದ ಅತಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಮುಂಬೈಯ ಪ್ರತಿಷ್ಠಿತ ಬಾಂದ್ರಾದಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 3,350 ಚದರ ಅಡಿ ಅಳತೆಯ ಮನೆ ಖರೀದಿ ಮಾಡಿ ಹೊಸ ಮನೆ ಪ್ರವೇಶದ ತವಕದಲ್ಲಿದ್ದಾರೆ. 18 ಮಹಡಿಗಳ ಸಂಧು ಬಿಲ್ಡಿಂಗ್ ಪ್ಯಾಲೇಸ್ ನಲ್ಲಿ ಈ ಮನೆ ಇದೆ. ಮುದ್ರಾಂಕ ಶುಲ್ಕ 1.20 ಕೋಟಿ ರೂಪಾಯಿ ಹಾಗೂ ನೋಂದಣಿ ಶುಲ್ಕ ₹ 30,000 ನ್ನು ಕಟ್ಟಿದ್ದು ಇನ್ನೂ ಕೆಲವೇ ದಿನಗಳಲ್ಲಿ ಈ ತಾರಾ ದಂಪತಿ ಹೊಸ ಮನೆಗೆ ಗೃಹಪ್ರವೇಶ ಮಾಡಲಿದ್ದಾರೆ.ಅದರಂತೆ ಇನ್ನೊಬ್ಬ ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ತಮ್ಮ ಧರ್ಮಪತ್ನಿ ದೇವಿಕಾ ಶೆಟ್ಟಿ ಅವರೊಂದಿಗೆ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರ ಬೆನ್ನಿಗೆ ಟಿ-20 ಕ್ರಿಕೆಟ್ ತಂಡಕ್ಕೆ ಅವರು ನಾಯಕನಾಗಿ ಆಯ್ಕೆ ಆಗಿರುವುದು ಮಾರಿಯಮ್ಮನ ಕೃಪೆ ಎನ್ನುವುದು ಸಹಾ ಕರಾವಳಿ ಭಾಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.