Join The Telegram | Join The WhatsApp |
ಶ್ರೀನಗರ:
ಭಾರತ ಜೋಡೊ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಸಮರ್ಥರಾಗಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ತೃತೀಯ ರಂಗ ಯಶಸ್ವಿಯಾಗುವುದಿಲ್ಲ’ ಎಂದು ರಾವುತ್ ತಿಳಿಸಿದ್ದಾರೆ.
‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಕೈಗೊಂಡಿರುವ ಯಾತ್ರೆಯ ಉದ್ದೇಶ ಮುಖ್ಯ ಉದ್ದೇಶ ದೇಶದಲ್ಲಿ ದ್ವೇಷ ಮತ್ತು ಭಯವನ್ನು ಹೋಗಲಾಡಿಸುವುದಾಗಿಯೇ ಹೊರತು ವಿರೋಧ ಪಕ್ಷಗಳನ್ನು ತಮ್ಮ ಪಕ್ಷದ ಬ್ಯಾನರ್ ಅಡಿಯಲ್ಲಿ ಒಗ್ಗೂಡಿಸುವುದು ಅಲ್ಲ’ ಎಂದಿದ್ದಾರೆ.
ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ, ಅವರು (ಗಾಂಧಿ) ತಮ್ಮ ನಾಯಕತ್ವದ ಗುಣಗಳನ್ನು ತೋರಿಸುತ್ತಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ದೊಡ್ಡ ಸವಾಲಾಗಲಿದ್ದಾರೆ ಎಂದು ರಾವುತ್ ಭವಿಷ್ಯ ನುಡಿದಿದ್ದಾರೆ.
‘ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲು ಸಮರ್ಥರೇ’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವುತ್, ‘ಹಾದು, ರಾಹುಲ್ ಪ್ರಧಾನಿಯಾಗಲು ಸಮರ್ಥರಿದ್ದಾರೆ. ಆದರೆ, ತಾವು ಪ್ರಧಾನಿಯಾಗಲು ಬಯಸುವುದಿಲ್ಲ ಎಂದು ಸ್ವತಃ ಗಾಂಧಿ ಹೇಳುತ್ತಿದ್ದಾರೆ. ಆದರೆ, ‘ಜನರು ಅವರನ್ನು ಉನ್ನತ ಹುದ್ದೆಯಲ್ಲಿ ನೋಡಲು ಬಯಸಿದಾಗ, ಅವರಿಗೆ ಯಾವುದೇ ಆಯ್ಕೆಯಿಲ್ಲ’ ಎಂದು ಉತ್ತರಿಸಿದ್ದಾರೆ.
‘3,500 ಕಿ.ಮೀ. ದೂರ ಪಾದಯಾತ್ರೆ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ದೃಢ ಸಂಕಲ್ಪ ಮತ್ತು ದೇಶದ ಬಗ್ಗೆ ಪ್ರೀತಿ ಇರಬೇಕು. ಭಾರತ್ ಜೋಡೊ ಯಾತ್ರೆಯಲ್ಲಿ ನಾನು ರಾಜಕೀಯವನ್ನು ನೋಡುವುದಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೊಡ್ಡ ಪಕ್ಷವಾಗಿದೆ. ಆದರೆ, ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಬಿಜೆಪಿ ಇತರ ಪಕ್ಷಗಳ ಮೇಲೆ ಅವಲಂಬಿತವಾಗಿದೆ ಅಥವಾ ಅಧಿಕಾರದಲ್ಲಿ ಉಳಿಯಲು ತನ್ನದೇ ಆದ ಸಮ್ಮಿಶ್ರ ಪಾಲುದಾರರನ್ನು ವಿಭಜಿಸಿದೆ ಎಂದು ರಾವುತ್ ವಾಗ್ದಾಳಿ ನಡೆಸಿದ್ದಾರೆ.
ಯಾತ್ರೆಯ 125ನೇ ದಿನವಾದ ಶುಕ್ರವಾರ ರಾವುತ್ ಯಾತ್ರೆಯಲ್ಲಿ ಭಾಗವಹಿಸಿ ಕಥುವಾದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ 12 ಕಿ.ಮೀ ದೂರ ನಡೆದಿದ್ದರು.
Join The Telegram | Join The WhatsApp |