
ರಾಯಬಾಗ: ಸಾಂಸ್ಕೃತಿಕ ತೊಟ್ಟಿಲು ಎನ್ನಿಸಿಕೊಂಡಿರುವ ರಾಯಬಾಗ ಪಟ್ಟಣ ಐತಿಹಾಸಿಕ ಪರಂಪರೆ ಹೊಂದಿದೆ ಎಂದು ಡಾ.ಬಸವರಾಜ ಸಬರದ ಹೇಳಿದರು.
ಬುಧವಾರ ಪಟ್ಟಣದ ಮಹಾವೀರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಬಾಗ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ರಾಯಬಾಗ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ರಾಜರ ಕಾಲದಿಂದಲೂ ಎಲ್ಲ ಭಾಷೆ, ಧರ್ಮ, ಎಲ್ಲ ವರ್ಗದ ಜನರನ್ನು ಒಳಗೊಂಡು ಸಮನ್ವಯದಿಂದ ಬಾಳುತ್ತಿರುವ ನಾಡು ಅದು ರಾಯಬಾಗ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಕನ್ನಡ ಭಾಷೆ, ಶಾಲೆಗಳನ್ನು ಉಳಿಸಿ ಬೆಳೆಸಲು ಶಾಸನ ಮಾಡುವ ಸರ್ಕಾರವೆ ಇಂದು ಇಂಗ್ಲಿಷ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಿರುವುದು ವಿಷಾದನೀಯ ಎಂದರು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅನೇಕರು ಇಂದು ಉನ್ನತ ಹುದ್ದೆಗಳನ್ನು ಅಲಂಕಾರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ಎಮ್.ಐಹೊಳೆಯವರು, ಪ್ರಥಮ ಬಾರಿಗೆ ರಾಯಬಾಗ ಮತಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ವಿಷಯ. ಕನ್ನಡ ಭಾಷೆ, ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ. ಕನ್ನಡವನ್ನು ಗಟ್ಟಿಯಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದರು.
ಅಬಾಜಿ ಪೌಂಡೇಶನ್ ಅಧ್ಯಕ್ಷ, ಬರ್ಗಂಡಿ ವಿಂಟರ್ಸ್ ಇನ್ ಯುರೋಪ ಕಾದಂಬರಿ ಲೇಖಕ ಪ್ರಣಯ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಲು, ಬೆಳೆಸಲು ಕನ್ನಡಿಗರು ಕಂಕಣಬದ್ಧವಾಗಿರಬೇಕು. ಕನ್ನಡ ರಕ್ಷಣೆಗೆ ತಾವು ಸದಾ ಸಿದ್ಧವಾಗಿರುವುದಾಗಿ ಹೇಳಿದರು. ಇಂದಿನ ಯುವಕರು ಮಾದಕದ್ರವ್ಯಗಳ ದಾಸರಾಗುತ್ತಿದ್ದಾರೆ, ಅದನ್ನು ತಪ್ಪಿಸಲು ಪಾಲಕರು ತಮ್ಮ ಮಕ್ಕಳಿಗೆ ಕ್ರೀಡೆ, ಸಾಹಿತ್ಯದಲ್ಲಿ ತೊಡಗುವಂತೆ ಪ್ರೋತ್ಸಾಹಬೇಕೆಂದರು.
ಸಮ್ಮೇಳನ ಸರ್ವಾಧ್ಯಕ್ಷೆ ಡಾ.ರತ್ನಾ ಬಾಳಪ್ಪನವರ, ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿಯವರು ಸಾನ್ನಿಧ್ಯವನ್ನು ವಹಿಸಿದ್ದರು.
ಸಮಾರಂಭದಲ್ಲಿ ಸಾಹಿತಿ ಡಾ.ವಿ.ಎಸ್.ಮಾಳಿ, ತಹಶೀಲ್ದಾರ ಸುರೇಶ ಮುಂಜೆ,
ಪಪಂ.ಅಧ್ಯಕ್ಷ ಅಶೋಕ ಅಂಗಡಿ, ಕ.ಸಾ.ಪ.ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ, ಸಿಪಿಐ ಬಿ.ಎಸ್.ಮಂಟೂರ, ಬಿಇಒ ಬಸವರಾಜಪ್ಪ ಆರ್., ಕ.ರಾ.ಸ.ನೌ.ಸಂಘದ ತಾಲೂಕಾಧ್ಯಕ್ಷ ಉಮೇಶ ಪೋಳ, ಕ.ಸಾ.ಪ ಕುಡಜಿ ಹೋಬಳಿ ಅಧ್ಯಕ್ಷ ಸಂತೋಷ ಸನದಿ, ದಶರಥ ಶೆಟ್ಟಿ ಹಾಗೂ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಕ.ಸಾ.ಪ ಪದಾಧಿಕಾರಿಗಳು, ಶಿಕ್ಷಕರು ಮತ್ತು ಕನ್ನಡಾಭಿಮಾನಿಗಳು ಇದ್ದರು.