Join The Telegram | Join The WhatsApp |
ಬೆಂಗಳೂರು :
ಮಾಂಡೌಸ್ ಚಂಡಮಾರುತದಿಂದಾಗಿ ಡಿ. 13ರವರೆಗೂ ರಾಜ್ಯದಲ್ಲಿ ಮಳೆ ಆರ್ಭಟಿಸಲಿದ್ದು, ಇಂದು ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ‘ಹಳದಿ ಅಲರ್ಟ್’ ಘೊಷಿಸಲಾಗಿದೆ.
ಚಳಿಗಾಲ ಮುಗಿಯುತ್ತಾ ಬಂದರೂ ಕರ್ನಾಟಕದಲ್ಲಿ ಇನ್ನೂ ಮಳೆಯ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯ ಚಳಿಗಾಲವನ್ನು ಮಳೆಗಾಲ ನುಂಗಿಹಾಕಿದೆ. ಮಾಂಡೌಸ್ ಚಂಡಮಾರುತದಿಂದ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಬೆಂಗಳೂರು, ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ 3 ದಿನ ಮಳೆಯಾಗುವ ಸಾಧ್ಯತೆಯಿದೆ. ಇಂದು ಬೆಂಗಳೂರು ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಮೇಲೆ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇಲೆ ‘ಮಾಂಡೌಸ್’ ಪ್ರಭಾವ ಹೆಚ್ಚಾಗಿರಲಿದೆ. ಇಂದು ಮತ್ತು ಡಿ. 12ರಂದು ಮಲೆನಾಡು, ಕರಾವಳಿಯಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆಯಾಗಲಿದೆ. ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ವ್ಯಾಪಕ ಮಳೆಯಾಗಲಿದೆ.
ಮಾಂಡೌಸ್ ಚಂಡಮಾರುತದಿಂದಾಗಿ ಡಿ. 13ರವರೆಗೂ ರಾಜ್ಯದಲ್ಲಿ ಮಳೆ ಆರ್ಭಟಿಸಲಿದ್ದು, ಇಂದು ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ‘ಹಳದಿ ಅಲರ್ಟ್’ ಘೊಷಿಸಲಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು, ಕೋಲಾರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಬೆಂಗಳೂರು ನಗರದಲ್ಲಿ 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಹಾಗೇ, 4.3 ಮಿಮೀ ಮಳೆ ಪ್ರಮಾಣ ದಾಖಲಾಗಿತ್ತು. ಇಂದು ಕೂಡ ಬೆಂಗಳೂರಿನಲ್ಲಿ ಚಳಿ, ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಭಾರೀ ಮಳೆಯಾಗಲಿದೆ. ಡಿಸೆಂಬರ್ 13ರವರೆಗೂ ಭಾರೀ ಮಳೆ ಮುಂದುವರಿಯಲಿದ್ದು, ಚಂಡಮಾರುತದ ಪ್ರಭಾವದಿಂದಾಗಿ ಗಾಳಿಯೂ ಬೀಸಲಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲಿ ಇಂದು ವ್ಯಾಪಕ ಮಳೆಯಾಗಲಿದೆ. ಭಾನುವಾರ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆಯಾಗಲಿದೆ. ಡಿಸೆಂಬರ್ 12ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆ ಹೆಚ್ಚಾಗಲಿದೆ.
ಮಳೆಯಿಂದಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಾಂಡೌಸ್ ಚಂಡಮಾರುತದಿಂದಾಗಿ ಚಳಿಯ ವಾತಾವರಣವು ಕರ್ನಾಟಕದಲ್ಲಿ ಇಂದು ಮುಂದುವರಿಯುವ ನಿರೀಕ್ಷೆಯಿದೆ. ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಚಂಡಮಾರುತದಿಂದ ಚಳಿ, ಬಿರುಗಾಳಿ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಬೆಂಗಳೂರಿನಲ್ಲಿ ವಿಪರೀತ ಚಳಿಯ ವಾತಾವರಣವಿದೆ.
ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಕಡಿಮೆ ತಾಪಮಾನ ವರದಿಯಾಗಿದೆ. ಇಂದು ಬೆಂಗಳೂರು, ಕೋಲಾರ, ಚಿಕ್ಕಮಗಳೂರು ಮತ್ತು ಘಟ್ಟ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದು, ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಇಂದು ಈ ವಾಯುಭಾರ ಕುಸಿತವು ಕರ್ನಾಟಕದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಇದರಿಂದಾಗಿ ಅಲ್ಲಿಯೂ ಮಳೆಯಾಗುತ್ತದೆ.
ಇಂದು ಯಾವ ರಾಜ್ಯಗಳಲ್ಲಿ ಮಳೆ ?
ಇಂದು ತಮಿಳುನಾಡು, ಆಂಧ್ರಪ್ರದೇಶ, ಪುದುಚೆರಿಯಲ್ಲಿ ಮಳೆ ಮುಂದುವರೆಯಲಿದೆ. ದಕ್ಷಿಣ ಪೆನಿನ್ಸುಲಾದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಲಡಾಖ್‌ನಲ್ಲಿ ಹಿಮ, ಮಳೆಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಸುರಿಯುವ ಸಾಧ್ಯತೆಯಿದೆ.
Join The Telegram | Join The WhatsApp |