ದೆಹಲಿ :
ಲೋಕಸಭಾ ಚುನಾವಣೆಯ ಸೆಮಿ ಫೈನಲ್ ಎಂದೇ ಪರಿಗಣಿತಗೊಂಡಿರುವ ದೇಶದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತಲಾ ಎರಡರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುನ್ನಡೆ ಪಡೆದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡರೆ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಮುನ್ನಡೆ ಪಡೆದಿದ್ದಾರೆ.

ರಾಜಸ್ಥಾನದ 199 ಕ್ಷೇತ್ರಗಳ ಪೈಕಿ ಬಿಜೆಪಿ 109ರಲ್ಲಿ, ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಮಧ್ಯಪ್ರದೇಶದಲ್ಲೂ 230 ಕ್ಷೇತ್ರಗಳ ಪೈಕಿ ಬಿಜೆಪಿ 127, ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

ತೆಲಂಗಾಣದ 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಬಿಆರ್‌ಎಸ್ 40 ಕ್ಷೇತ್ರಗಳಲ್ಲಿ ಮುಂದಿದೆ. ಛತ್ತೀಸಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ. ಛತ್ತೀಸಗಢದ 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 57 ಮತ್ತು ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಕಾಮರೆಡ್ಡಿ ಮತ್ತು ಗಜ್ವೆಲ್ ಎರಡೂ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಇದೀಗ ಗಜ್ವೆಲ್ ಮತಕ್ಷೇತ್ರದಲ್ಲಿ 300 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮತಗಟ್ಟೆ ಸಮೀಕ್ಷೆ ಪ್ರಕಾರವೇ 4 ರಾಜ್ಯಗಳಲ್ಲೂ ಆರಂಭಿಕ ಟ್ರೆಂಡ್ ಕಂಡುಬಂದಿದೆ. ಇದೇ ಟ್ರೆಂಡ್ ಮುಂದುವರೆದರೆ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬುರುವುದು ನಿಚ್ಚಳವಾಗಿದೆ.

ರಾಜಸ್ಥಾನ ಹಾಗೂ ಮಧ್ಯಪ್ರದೇಶ ಬಿಜೆಪಿ ಅಧಿಕಾರಕ್ಕೆ ಇರುವುದು ಬಹುತೇಕ ಖಚಿತವಾಗಿದೆ.