ದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕಾಂಗ್ರೆಸ್ ತೊರೆದು ಒಂದು ದಿನದ ಮೊದಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ ಅವರು ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕ್ರಮವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಸ್ತುತ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾಬಲವಿಲ್ಲ. ಹೀಗಾಗಿ ಗುಜರಾತಿನಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಲದೆ, ಗೋವಿಂದಭಾಯಿ ಧೋಲಾಕಿಯಾ, ಮಾಯಾಂಕ್‌ಭಾಯ್ ನಾಯಕ್, ಡಾ. ಜಶ್ವಂತ ಸಿನ್ಹ ಸಲಾಮ್‌ ಸಿನ್ಹ ಪರ್ಮಾರ್ ರಾಜ್ಯಸಭಾ ಚುನಾವಣೆಗೆ ಗುಜರಾತಿನಿಂದ ಸ್ಪರ್ಧಿಸಲಿರುವ ಇತರ ಅಭ್ಯರ್ಥಿಗಳಾಗಿದ್ದಾರೆ.

ಮಹಾರಾಷ್ಟ್ರಕ್ಕೆ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ, ಮೇಧಾ ಕುಲಕರ್ಣಿ ಮತ್ತು ಡಾ.ಅಜಿತ ಗೋಪ್‌ಛಾಡೆ ಅವರಿಗೆ ಟಿಕೆಟ್‌ ನೀಡಿದೆ.
ಉತ್ತರ ಪ್ರದೇಶದಿಂದ ಬಿಜೆಪಿಯ ಏಳು ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್‌, ಮಾಜಿ ಸಂಸದ ಚೌಧರಿ ತೇಜ್‌ವೀರ್‌ ಸಿಂಗ್‌, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರಪಾಲ ಮೌರ್ಯ, ಮಾಜಿ ರಾಜ್ಯ ಸಚಿವೆ ಸಂಗೀತಾ ಬಲ್ವಂತ್‌, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕಿ ಸಾಧನಾ ಸಿಂಗ್‌ ಮತ್ತು ಆಗ್ರಾದ ಮಾಜಿ ಮೇಯರ್‌ ನವೀನ್‌ ಜೈನ್‌ ನಾಮಪತ್ರ ಸಲ್ಲಿಸಿದ್ದಾರೆ.

ಮಿಲಿಂದ್‌ ದಿಯೋರಾ ಶಿವಸೇನೆಯಿಂದ ಸ್ಪರ್ಧೆ…
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮುಂಬರುವ ರಾಜ್ಯಸಭಾ ಚುನಾವಣೆಗೆ ಮಿಲಿಂದ್ ದಿಯೋರಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಕಾಂಗ್ರೆಸ್‌ ಜೊತೆಗಿನ ದಶಕಗಳ ಹಳೆಯ ತಮ್ಮ ಕುಟುಂಬದ ಸಂಬಂಧವನ್ನು ಮುರಿದು ಇತ್ತೀಚೆಗೆ ಶಿವಸೇನೆ ಪಕ್ಷ ಸೇರಿದ್ದರು. ದಿಯೋರಾ ನಾಳೆ, ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಮುಂಬೈ ಮೂಲದ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ನಾಯಕರಾಗಿದ್ದ ದಿವಂಗತ ಮುರಳಿ ದೇವೋರಾ ಅವರ ಪುತ್ರ ಮಿಲಿಂದ್ ದಿಯೋರಾ ಅವರು ಶಿವಸೇನೆಗೆ ಸೇರ್ಪಡೆಯಾಗುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷವು ತನ್ನ ಸೈದ್ಧಾಂತಿಕ ಮತ್ತು ಸಾಂಸ್ಥಿಕ ಬೇರುಗಳಿಂದ ವಿಮುಖವಾಗಿದೆ, ಜಾತಿ ವಿಭಜನೆಗಳನ್ನು “ಪೋಷಣೆ” ಮಾಡುತ್ತದೆ ಮತ್ತು ಉದ್ಯಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದರು.
ರಾಜ್ಯಸಭಾ ಚುನಾವಣೆ ಫೆಬ್ರವರಿ 27 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.