ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಮತ್ತೊಂದು ದಿನಕ್ಕೆ ವಿಸ್ತರಣೆ ಮಾಡಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಉದ್ಯಮಿ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರ ಇದೀಗ ವಿಧಾನ ಮಂಡಲದ ಅಧಿವೇಶನವನ್ನು ಮತ್ತೊಂದು ದಿನಕ್ಕೆ ವಿಸ್ತರಿಸಲು ಮುಂದಾಗಿದೆ.

ಶುಕ್ರವಾರ ಅಂತ್ಯವಾಗಬೇಕಿದ್ದ ವಿಧಾನಮಂಡಲ ಬಜೆಟ್‌ ಅಧಿವೇಶನದ ಅವಧಿಯನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ. ಸೋಮವಾರವೂ ಉಭಯ ಸದನಗಳಲ್ಲಿ ಕಲಾಪ ನಡೆಯಲಿದೆ.

ಮಂಗಳವಾರ ರಾಜ್ಯಸಭೆಯ ಚುನಾವಣೆ ನಡೆಯುವುದರಿಂದ ಶಾಸಕರನ್ನು ಹಿಡಿದಿಡಲು ಅನುಕೂಲವಾಗುತ್ತದೆ ಎಂಬ ಉದ್ದೇಶವೂ ಅಡಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇದೀಗ ಸೋಮವಾರವು ಅಧಿವೇಶನ ಮುಂದುವರಿಸಲು ತೀರ್ಮಾನಿಸಿದೆ.

ಶುಕ್ರವಾರ ಬೆಳಿಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಯು.ಟಿ.ಖಾದರ್‌ ಈ ವಿಷಯ ಪ್ರಕಟಿಸಿದರು.ಶುಕ್ರವಾರ ಬೆಳಗ್ಗೆ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಅಧಿವೇಶನವನ್ನು ಫೆ.26ರವರೆಗೆ ವಿಸ್ತರಿಸಲಾಗಿದೆ. ಸಿಎಂ ಬಜೆಟ್ ಮೇಲಿನ ಚರ್ಚೆಗೆ ಸೋಮವಾರ ಉತ್ತರ ನೀಡಲಿದ್ದಾರೆ ಎಂದು ಪ್ರಕಟಿಸಿದರು.
ಪೂರ್ವ ನಿಗದಿಯಂತೆ ಅಧಿವೇಶನ ಶುಕ್ರವಾರ ಮುಗಿಯಬೇಕಾಗಿತ್ತು. ಅಧಿವೇಶನ ವಿಸ್ತರಣೆ ನಿರ್ಣಯದ ಹಿನ್ನೆಲೆಯಲ್ಲಿ ಕಾರ್ಯ ಸೂಚಿ ಪ್ರಕಾರ ಅಧಿವೇಶನ ನಡೆಸಲು ಶಾಸಕರು ಸಹಕರಿಸಬೇಕು ಎಂದರು.