ಮಂಗಳೂರು : ಸಾಹಿತ್ಯ ಕ್ಷೇತ್ರದ ಸಾಧನೆಗೆ ಈ ಬಾರಿ ಜಿಲ್ಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಪ್ರಶಾಂತ ಮಾಡ್ತ ಅವರು ಮಂಗಳೂರಿನ ಸೇಂಟ್ ಅಲೋಶಿಸ್‌ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದವರು. ಕನ್ನಡದ ಪ್ರಥಮ ಸಮಾನಾರ್ಥಕ ಹಾಗೂ ವಿರುದ್ದಾರ್ಥಕ ಶಬ್ದಕೋಶ ‘ಪದನಿಧಿ’ಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇದು ಸುಮಾರು 1,000 ಪುಟಗಳನ್ನು ಹೊಂದಿದೆ. ಕೊಂಕಣಿಯಲ್ಲಿ ಎರಡು ಶಬ್ದಕೋಶಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಮೂರು ಭಾಷೆಗಳಲ್ಲಿ ಸುಮಾರು 14 ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡ-ಕೊಂಕಣಿ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಶೋಧನಾ ಕ್ಷೇತ್ರಗಳಲ್ಲಿ ಅವರ ಮಹತ್ತರ ಸೇವೆಯನ್ನು ಗುರುತಿಸಿ, ‘ಇಂಡಿಯಾ ಟುಡೆ’ ಪತ್ರಿಕೆಯು ‘ಭಾರತದ 50 ಹರಿಕಾರರಲ್ಲಿ ಒಬ್ಬರು’ ಎಂದು ಆಯ್ಕೆ ಮಾಡಿ ಗೌರವಿಸಿತ್ತು.

ರಾಜ್ಯೋತ್ಸವ ಪ್ರಶಸ್ತಿ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ. ಇನ್ನು ಮುಂದೆಯೂ ಸಂಶೋಧನೆ, ಸಾಹಿತ್ಯ ವಲಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಹುಮ್ಮಸ್ಸು ನೀಡಿದೆ ಎಂದು ಪ್ರತಿಕ್ರಿಯಿಸಿದರು.