ಬಂಟ್ವಾಳ: ಕರಾವಳಿ ಕರ್ನಾಟಕದ ಅತ್ಯಂತ ಶ್ರೇಷ್ಠ ಕಲೆಯಾದ ಕೋಲ ಕಟ್ಟುವ ಕಲಾವಿದರೊಬ್ಬರಿಗೆ ಇದೀಗ ಕರ್ನಾಟಕದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಕರ್ನಾಟಕ ಸರ್ಕಾರ ಕೊಡಮಾಡುವ ಜಾನಪದ ಕ್ಷೇತ್ರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದೈವನರ್ತಕ-ಪಾತ್ರಿ ಲೋಕಯ್ಯಸೇರಾ ಆಯ್ಕೆಯಾಗಿದ್ದಾರೆ. ಕೇರಳ ಮೀಂಜದ ಕನ್ಯಾನ ಅಂಗು ಮತ್ತು ಅಕ್ಕು ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಇವರು, ಹಿರಿಯರಿಂದ ದೈವಾರಾಧನೆ ಮತ್ತು ದೈವನರ್ತನವನ್ನು ಕಲೆಯನ್ನೇ
ಬದುಕಾಗಿಸಿಕೊಂಡವರು.

ಕಳೆದ 57 ವರ್ಷಗಳಿಂದ ಜಾನಪದ ಕಲಾವಿದನಾಗಿ, ದೈವಾರಾಧನೆಯ ಕ್ಷೇತ್ರದಲ್ಲಿ ಭೂತಕಟ್ಟುವ ನರ್ತಕ- ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ತುಳುನಾಡಿನ ಕಾರಣಿಕ ದೈವಗಳಾದ ಕಲ್ಲುರ್ಟಿ, ಕಲ್ಕುಡ, ಪಂಜುರ್ಲಿ, ಚಾಮುಂಡಿ, ಧೂಮಾವತಿ, ರಕ್ತೇಶ್ವರಿ ಇತ್ಯಾದಿಗಳಿಗೆ ನೇಮಗಳನ್ನು ಆಚಾರದಲ್ಲಿ ಕಟ್ಟಿರುತ್ತಾರೆ. ವರ್ಷದಲ್ಲಿ ಸರಿಸುಮಾರು ನೂರರಂತೆ ಇದುವರೆಗೆ ಸಾವಿರಾರು ಭೂತಗಳನ್ನು ನೇಮ ಕಟ್ಟಿರುತ್ತಾರೆ. ಕುಲದೈವ, ಸೀಮೆದೈವ, ರಾಜನ್ ದೈವಗಳ ನೇಮ ವಹಿಸಿರುವುದಲ್ಲದೆ ಹತ್ತು ಹಲವು ಊರ ಜಾತ್ರೆಗಳಲ್ಲೂ ಪ್ರಧಾನ ದೈವಗಳ ಪಾತ್ರಿಯಾಗಿ ಸೇವೆಸಲ್ಲಿಸಿದ್ದಾರೆ.

ತುಳುನಾಡಿನ ಮೌಖಿಕ ಸಾಹಿತ್ಯವೆನಿಸಿದ ಸಂಧಿ, ದೈವಪುರಾಣಗಳನ್ನು ಪರಂಪರಾನುಗತವಾಗಿ ಅಭ್ಯಾಸಿಸಿ, ದೈವಾರಾಧನೆಯ ಸಂದರ್ಭದಲ್ಲಿ ಆಯಾಯ ದೈವಗಳಿಗೆ ಸಂಬಂಧಿಸಿದ ಸಂಧಿ, ಮದಿಪುಗಳನ್ನು ಬಾಯಿಪಾಠವಾಗಿ ಒಪ್ಪಿಸುವಷ್ಟು ಪ್ರಭುತ್ವವನ್ನು ಹೊಂದಿರುತ್ತಾರೆ. ಭೂತನರ್ತನ ಸೇವೆಯಲ್ಲಿ ಜನರ ನಂಬಿಕೆಗೆ ಚ್ಯುತಿ ಬಾರದಂತೆ ಹೊಸ ಆಯಾಮವನ್ನು ತಂದು ಹಲವು ಪ್ರಶಸ್ತಿ ಮತ್ತು ಸನ್ಮಾನಗಳನ್ನು ಪಡೆದುಕೊಂಡವರು. ಬಂಟ್ವಾಳ ತಾಲೂಕಿನಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಲೋಕಯ್ಯ ಸೇರಾ, ಸಾರ್ವಜನಿಕ ಕ್ಷೇತ್ರದ ಹಲವಾರು ಸಂಘಟನೆಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರಿಗೆ 2012 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೆ, ಗಣರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶೃಂಗ ಪ್ರಶಸ್ತಿ, ಸೌರಭ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಗೌರವ ಸನ್ಮಾನಗಳು ದೊರೆತಿವೆ.

ಸಂತಸ :

ಅಣ್ಣಪ್ಪ ಪಂಜುರ್ಲಿ, ರಕೇಶ್ವರಿ, ಜುಮಾದಿ ಮತ್ತಿತರ ರಾಜನ್ ದೈವ ನರ್ತಕನಾಗಿದ್ದು, ಎರಡು ದಶಕಗಳಿಂದ ಶುದ್ಧ ಸಸ್ಯಾಹಾರಿಯಾಗಿದ್ದೇನೆ. ಮದ್ಯ ಮತ್ತು ವೀಳ್ಯದೆಲೆ ಸೇವನೆ ಮಾಡುತ್ತಿಲ್ಲ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಲೋಕಯ್ಯ ಸೇರ ತಿಳಿಸಿದರು.