ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಎಸ್ ಡಿ ಎಂ ಕಾನೂನು ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಎ. ರಾಜೇಂದ್ರ ಶೆಟ್ಟಿ ಅವರಿಗೆ ಲಭಿಸಿದೆ. ಕಾನೂನು ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರೊ. ಎ. ರಾಜೇಂದ್ರ ಶೆಟ್ಟಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 1994 ರಿಂದ ಪ್ರಾಂಶುಪಾಲರಾಗಿದ್ದರು. ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದವರು. ಕಾಲೇಜಿಗೆ ಹಲವು ಕೊಡುಗೆಗಳನ್ನು ನೀಡಿದವರು.
ಪ್ರಾಂಶುಪಾಲರ ಕೊಠಡಿಯಲ್ಲೂ, ತರಗತಿಯ ಒಳಗೂ ತತ್ವಶಾಸ್ತ್ರದ ಬೋಧನೆಗೆ ವಿಧಾನವನ್ನು
ಪೂರ್ವಭಾವಿಯಾಗಿ ಪರಿಚಯಿಸಿದರು. ಇಂಗ್ಲಿಷಿನಲ್ಲಿ ಅವರಿಗಿದ್ದ ಹಿಡಿತ, ಉಪನ್ಯಾಸ ಉಪನ್ಯಾಸಗಳನ್ನು ನೀಡುವಲ್ಲಿ ಅವರದೇ ವಿಶಿಷ್ಟ ಶೈಲಿ ಮತ್ತು ತರಗತಿಯೊಳಗೆ ಆದ ವಿಶಿಷ್ಟ ವಿದ್ಯಾರ್ಥಿಗಳ ಮನ ಒಲಿಸುವ ಅವರ ಚಾಕಚಕ್ಯತೆ ಇವೆಲ್ಲವೂ ಅವರನ್ನು ಎಲ್ಲರೂ ಇಷ್ಟಪಡುವಂತೆ ಮಾಡಿತು. ಬ್ಯಾಂಕಿಂಗ್ ಕಾನೂನು, ದೌರ್ಜನ್ಯಗಳ ಕಾನೂನು ಮತ್ತು ವೃತ್ತಿಪರ ನೀತಿಶಾಸ್ತ್ರದ ಕುರಿತು ಅವರು ನೀಡುತ್ತಿದ್ದ ಉಪನ್ಯಾಸಗಳನ್ನು ಅವರ ವಿದ್ಯಾರ್ಥಿಗಳು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.

ಎ.ರಾಜೇಂದ್ರ ಶೆಟ್ಟಿ ಅವರು, ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡಿದವರು. ಅವರ ಮಾನವೀಯ ಸಂಬಂಧ, ಹಾಸ್ಯಪ್ರಜ್ಞೆ ಚೈತನ್ಯಶೀಲವಾಗಿತ್ತು.

ಪ್ರಶಸ್ತಿಗೆ ಅರ್ಜಿ ಹಾಕಿಲ್ಲ, ನನಗೆ ಸಣ್ಣ ಅಚ್ಚರಿ ಇದು. ಪ್ರಶಸ್ತಿ ಬರುವಲ್ಲಿ ನನ್ನ ವಿದ್ಯಾರ್ಥಿಗಳ ಶ್ರಮವಿದೆ. ಕೆಲಸ ಮಾಡಲು ಅವಕಾಶ ಕೊಟ್ಟಿರುವ ಸಂಸ್ಥೆಯನ್ನು ಸ್ಮರಿಸುತ್ತೇನೆ. ವಿದ್ಯಾರ್ಥಿಗಳ ಪ್ರೀತಿಗಾಗಿ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಮಹನೀಯರೆನಿಸಿದ ಪ್ರೊ. ಎ. ರಾಜೇಂದ್ರ ಶೆಟ್ಟಿ ಅವರ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಉನ್ನತವಾದ ಸ್ಥಾನಗಳನ್ನು ಅಲಂಕರಿಸಿ, ಅವರ ಆದರ್ಶಗಳ ಪಾಲನೆ ಮಾಡುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಶೆಟ್ಟಿ ಅವರನ್ನು ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.