ನವದೆಹಲಿ :
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ. ಸೋಮವಾರ ದೇವಾಲಯದ ಗರ್ಭಗುಡಿ ಪೂರ್ಣಗೊಂಡಿದ್ದು, ಜನವರಿ 22 ರಂದು ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕಾಗಿ ಕಾಯುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಘೋಷಿಸಿದೆ.
“500 ವರ್ಷಗಳ ತಪಸ್ಸಿನ ಪರಾಕಾಷ್ಠೆ. ಪ್ರಭು ಶ್ರೀ ರಾಮಲಲ್ಲಾ ಅವರ ಪವಿತ್ರ ಗರ್ಭಗೃಹವು ಪ್ರಪಂಚದಾದ್ಯಂತ ಲಕ್ಷಾಂತರ ರಾಮಭಕ್ತರನ್ನು ಸ್ವಾಗತಿಸಲು ತನ್ನ ಸಿದ್ಧವಾಗಿದೆ” ಎಂದು ಟ್ರಸ್ಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಹಾಗೂ ರಾಮ ಮಂದಿರದ ಇತ್ತೀಚಿನ ದೃಶ್ಯಗಳನ್ನು ಒಳಗೊಂಡ ವೀಡಿಯೊವನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ. ರಾಮ ಮಂದಿರದ ನಿರ್ಮಾಣ ಹಂತ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಚಿತ್ರಣವನ್ನು ಇದರಲ್ಲಿ ನೋಡಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಪ್ರಮುಖ ಅತಿಥಿಗಳು ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ 24 ರಿಂದ ಸಾರ್ವಜನಿಕರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಗಾಗಿ ಅಲಂಕೃತಗೊಳ್ಳುತ್ತಿದೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ. ದೇವಾಲಯದ ಪ್ರತಿಯೊಂದು ಮಹಡಿಯೂ 20 ಅಡಿ ಎತ್ತರವಿದ್ದು ದೇಗುಲಕ್ಕೆ ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.
ಅಯೋಧ್ಯೆಯಲ್ಲಿ ರಾಮಮಂದಿರದ ಮಹಾ ಉದ್ಘಾಟನೆಗೆ 7,000 ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ.

ಆಮಂತ್ರಣ ಪತ್ರವನ್ನು ಸ್ವೀಕರಿಸಿದವರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ದೇಶಾದ್ಯಂತ 4,000 ವೀಕ್ಷಕರು ಮತ್ತು ವಿದೇಶಗಳಿಂದ 50 ಅತಿಥಿಗಳು ಸೇರಿದ್ದಾರೆ. ಆಹ್ವಾನಿತರ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದ್ದಾರೆ.
ಉದ್ಘಾಟನೆಯ ಆಮಂತ್ರಣ ಪತ್ರವು ದೇವಾಲಯ ಮತ್ತು ಭಗವಾನ್ ರಾಮನ ಭವ್ಯವಾದ ಚಿತ್ರವನ್ನು ಹೊಂದಿದೆ. ದೊಡ್ಡದಾದ, ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಕಾರ್ಡ್‌ಗಳಲ್ಲದೆ, ಆಮಂತ್ರಣವು ರಾಮ ಜನ್ಮಭೂಮಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಕೆಲವು ಪ್ರಮುಖ ವ್ಯಕ್ತಿಗಳ ಸಂಕ್ಷಿಪ್ತ ಪ್ರೊಫೈಲ್‌ಗಳನ್ನು ಹೊಂದಿರುವ ಕಿರುಪುಸ್ತಕವನ್ನು ಸಹ ಒಳಗೊಂಡಿದೆ.