
ರಾಮದುರ್ಗ: ಭಾಷಾ ಸಾಮರಸ್ಯವನ್ನು ಸಾರುವ ಪುಣೆಯ ಪೇಳ್ವೆಗಳ (ಮರಾಠಿಗರ) ಆಡಳಿತದಲ್ಲಿ ಸ್ಥಾಪಿತ ವೆಂಕಟೇಶ್ವರ ಜಾತ್ರೆಯನ್ನು ಮರಾಠಿ-ಕನ್ನಡಿಗರು ಸೇರಿ ಸಹೋದರತ್ವದಿಂದ ಆಚರಿಸುತ್ತಿದ್ದಾರೆ.
ಐತಿಹಾಸಿಕ ಹಿನ್ನೆಲೆಯ ರಾಮದುರ್ಗದ ವೆಂಕಟೇಶ್ವರ ದೇವರ ಜಾತ್ರಾ ಮಹೋತ್ಸವ ಮಾರ್ಚ್ 30 ರಿಂದ ಆರಂಭಗೊಂಡು ವಾಹನೋತ್ಸವ ಪ್ರತಿದಿನ ರಾತ್ರಿಯಿಂದ ಜರುಗಲಿದೆ. ವೆಂಕಟೇಶ್ವರ ದೇವರ ಮಹಾರಥೋತ್ಸವವು ಏ. 7ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ.
ರಾಮದುರ್ಗದ ಸಂಸ್ಥಾನದ ಆಡಳಿತವು ಪುಣೆಯ ಪೇಳ್ವೆಗಳ (ಮರಾಠಿ) ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗದ ಸಂಸ್ಥಾನಗಳ ಉಭಯ ಸಹೋದರರ ಆಡಳಿತ ವಿಭಜನೆಯಾದ ನಂತರ ರಾಮದುರ್ಗದ ಕೊನೆಯ ಅರಸು ರಾಮ್‌ರಾವ್‌ಭಾವೆ ಇಲ್ಲಿಯ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸಿಕೊಂಡು ಬಂದಿದ್ದರು. ಈಗಲೂ ಪ್ರತಿ ವರ್ಷದ ರಾಮನವಮಿ ಮರುದಿನ ಸಾವಿರಾರು ಜನರು ಶ್ರದ್ಧಾ ಭಕ್ತಿಯಿಂದ ವೆಂಕಟೇಶ್ವರ ಜಾತ್ರೆಯನ್ನು ವೈಭವದಿಂದ ನಡೆಸಿಕೊಂಡು ಬರುತ್ತಾರೆ. ಈ ಜಾತ್ರೆಯು ಈ ಭಾಗದಲ್ಲಿಯೇ ಪ್ರಖ್ಯಾತಿ ಹೊಂದಿದೆ.
ಮಲಪ್ರಭಾ ನದಿಯ ತಟದಲ್ಲಿಯ ಭವ್ಯ ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ತೇರು ಬಜಾರಿನಲ್ಲಿ ಏ. 7ರಂದು ಬೆಳಿಗ್ಗೆ ಕಲ್ಲಿನ ತೇರನ್ನು ಭಕ್ತರು ಎಳೆದು ತರುತ್ತಾರೆ. ವೆಂಕಟೇಶ್ವರ ದೇವಸ್ಥಾನದಿಂದ ಹನುಮಂತ ದೇವರ ಗುಡಿಯ ತನಕ ತಂದು ನಿಲ್ಲಿಸಿದ ನಂತರ ಸುಮಾರು 30 ಡಿಗ್ರಿಯಷ್ಟು ವಾಲಿರುವ ರಥವನ್ನು ಇಳಿಜಾರಿನಲ್ಲಿಯೇ ಒಂದೂವರೆ ಗಂಟೆಗಳ ಕಾಲ ಸನ್ನೆಗೋಲುಗಳ ಮೂಲಕ ಪೂರ್ಣ ಪ್ರಮಾಣದಲ್ಲಿ ತಿರುಗಿಸಿ ನಿಲ್ಲಿಸುತ್ತಾರೆ. ಇದೊಂದು ವಿಶೇಷ ಜಾತ್ರೆ
ಎಂದು ಹೇಳಬಹುದು. ಈ ಪ್ರಯತ್ನದಲ್ಲಿ ಪಟ್ಟಣದ ಭೋವಿ ಜನಾಂಗದ ಜನರ ಬಹುದಿನಗಳ ಸೇವೆ ಜನ ಮೆಚ್ಚುವಂತದ್ದು. ಈ ರೀತಿ ರಥ ತಿರುಗಿಸುವ ಕಾರ್ಯ ರಾಮದುರ್ಗದಲ್ಲಿ ಮಾತ್ರ ಜರುಗುತ್ತದೆ. ಇದೊಂದು ರೋಮಾಂಚಕಾರಿ ಪ್ರಯತ್ನವೂ ಹೌದು.
ಜಾತ್ರೆಯ ಸಿದ್ಧತೆ ಭರದಿಂದ ನಡೆದಿದೆ. ಮನೆಗಳನ್ನು ಸಿಂಗರಿಸಿರುವ ರಾಮದುರ್ಗದ ಜನತೆ ಹಬ್ಬದ ವಾತಾವರಣದಲ್ಲಿ ಮಿಂದು ಹೋಗಿದ್ದಾರೆ.
ಜಾತ್ರೆ ಅಂಗವಾಗಿ ಪ್ರತಿ ರಾತ್ರಿ ವೆಂಕಟೇಶ್ವರ ದೇವರ ವಾಹನೋತ್ಸವ ಜರುಗಲಿದೆ. ಇದು ಸಹ ಜಾತ್ರೆಗೆ ಯಾವುದರಲ್ಲಿಯೂ ಕಡಿಮೆ ಎನಿಸುವುದಿಲ್ಲ. ವಾಹನೋತ್ಸವ ನಡೆಯುವ ದಿನ ಮತ್ತು ವಾಹನದ ಹೆಸರು ಇಂತಿದೆ. ಮಾರ್ಚ್ 30ರಂದು ಭಾನುವಾರ ಪುಷ್ಪವಾಹನ, ಸೋಮವಾರ ಗಜವಾಹನ, ಮಂಗಳವಾರ ಅಶ್ವವಾಹನ, ಬುಧವಾರ ಶೇಷವಾಹನ, ಗುರುವಾರ ಸಿಂಹ ವಾಹನ, ಶುಕ್ರವಾರ ಚಂದ್ರ ವಾಹನ, ಶನಿವಾರ ಹನುಮಂತ ವಾಹನ, ಭಾನುವಾರ ಮಧ್ಯಾಹ್ನ ಸೂರ್ಯ ವಾಹನ, ರಾತ್ರಿ ಗರುಡ ವಾಹನದ ವಾಹನೋತ್ಸವ ಪ್ರತಿ ರಾತ್ರಿ 9ಕ್ಕೆ ಜರುಗುವುದು. ಸೋಮವಾರ ಬೆಳಿಗ್ಗೆ 9.30ಕ್ಕೆ ಮಹಾರಥೋತ್ಸವ ಜರುಗಲಿದೆ.
ಭ್ರಾತೃತ್ವದ ಸಂಕೇತವಾಗಿರುವ ರಾಮದುರ್ಗದ ವೆಂಕಟೇಶ್ವರ ಜಾತ್ರೆಯಲ್ಲಿ ಎಲ್ಲ ಜಾತಿಯ ಜನ ಸಾಮರಸ್ಯದಿಂದ ಪಾಲ್ಗೊಳ್ಳುವುದು ವಿಶೇಷ-ಗಂಗಾಧರ ಭೋಸಲೆ ಕಾರ್ಯದರ್ಶಿ ಜಾತ್ರಾ ಕಮಿಟಿ