ಮೌಲ್ಯಾಧಾರಿತ ಮುತ್ಸದ್ದಿ ದಿ.ರಾಮಕೃಷ್ಣ ಹೆಗಡೆಯವರ ಜನ್ಮದಿನವಿದು.ಅವರು ಹುಟ್ಟಿದ್ದು 29.8.1926.ನಿಧನರಾದದ್ದು 12.1.2004.
ಅವರ ಎಲ್ಲ ಏಳು ಬೀಳುಗಳನ್ನು ಪತ್ರಕರ್ತನಾಗಿ, ಕನ್ನಡ ಚಳುವಳಿಗಾರನಾಗಿ ಹಾಗೂ ಅವರ ಪಕ್ಷದ ಪದಾಧಿಕಾರಿಯಾಗಿ ಸಮೀಪದಿಂದ ಕಂಡಿದ್ದೇನೆ.ಅವರು ವಾಜಪೇಯಿ ಸರಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದಾಗ ಒಂದು ರೀತಿಯಲ್ಲಿ ಸ್ಥಾನಿಕ “ಕಾರ್ಯದರ್ಶಿಯಾಗಿ” ಕೆಲಸ ಮಾಡಿದ್ದೇನೆ.
ಅವರು ದಿಲ್ಲಿಯಲ್ಲಿರಲಿ ವಿದೇಶ ಪ್ರವಾಸದಲ್ಲಿರಲಿ. ಅವರಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಅವರ ಗಮನಕ್ಕೆ ನಿತ್ಯ ರಾತ್ರಿ ಎಂಟು ಗಂಟೆಗೆ ಫ್ಯಾಕ್ಸ್ ಮೂಲಕ ನಾನು ಕಳಿಸುತ್ತಿದ್ದೆ.
ಅವರು ವಿದೇಶ ಪ್ರವಾಸ ಆರಂಭಿಸಿದ ಕೂಡಲೇ ಅವರ ಪ್ರವಾಸ ಕಾರ್ಯಕ್ರಮ ಪಟ್ಟಿ ” ಟಾಪ್ ಸೀಕ್ರೇಟ್” ತಲೆಬರಹದೊಂದಿಗೆ ಬೆಳಗಾವಿಯ ಎಸ್ ಟಿ ಡಿ ಬೂಥ್ ಫ್ಯಾಕ್ಸಿಗೆ ತಲುಪುತ್ತಿತ್ತು.ಅದರಲ್ಲಿ ಹೆಗಡೆಯವರು ಇಳಿದುಕೊಳ್ಳುವ ಹೊಟೆಲ್ ಗಳ ಫೋನ್ ಮತ್ತು ಫ್ಯಾಕ್ಸ್ ನಂಬರ್ ಗಳಿರುತ್ತಿದ್ದವು. ಅದಕ್ಕೆ ಎಲ್ಲ ಮಾಹಿತಿ ಮತ್ತು ಪತ್ರಿಕಾ ತುಣುಕುಗಳನ್ನು ಕಳಿಸುತ್ತಿದ್ದೆ.ಇದನ್ನು ಚಾಚೂ ತಪ್ಪದೇ ಒಂದೂವರೆ ವರ್ಷ ಮಾಡಿದ್ದೇನೆ.ನನ್ನ ಈ ಅಳಿಲು ಸೇವೆಯನ್ನು ಹೆಗಡೆಯವರು ದಿಲ್ಲಿ ಮತ್ತು ಬೆಂಗಳೂರಿನ ತಮ್ಮ ಆಪ್ತರ ಮುಂದೆ ಹೇಳುತ್ತಿದ್ದರಂತೆ.
ಅವರು 1997 ರಲ್ಲಿ ರಾಷ್ಟೀಯ ನವನಿರ್ಮಾಣ ವೇದಿಕೆ ಕಟ್ಟಿದಾಗ , ನಂತರ ಲೋಕಶಕ್ತಿ ಪಕ್ಷ ಸ್ಥಾಪಿಸಿದಾಗ ನನಗೆ ರಾಜ್ಯ ಕಾರ್ಯದರ್ಶಿ ಸ್ಥಾನ ಕೊಟ್ಟರು.ನಂತರ ಅವರು ಕೇಂದ್ರದಲ್ಲಿ ಮಂತ್ರಿಯಾದಾಗಲೂ ಅವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೆ.
ಬರೆದರೆ ಪುಸ್ತಕವೇ ಆದೀತು.ಅವರ ಕೊನೆಗಳಿಗೆಯಲ್ಲಿ ಕಟ್ಟಾ ಬೆಂಬಲಿಗರು ಕೈಕೊಟ್ಟರೆಂಬನೋವುಅವರಿಗಿತ್ತು.ಜೀವರಾಜ್ ಆಳ್ವಾ, ಬಸವರಾಜ ಹೊರಟ್ಟಿ, ಮಲ್ಲಣ್ಣ ನಾಡಗೌಡ ಹಾಗೂ ನಮ್ಮಂತೆ ಕೆಲವರು ಮಾತ್ರ ಹೆಗಡೆಯವರ ಕೊನೆಯುಸಿರು ಇರುವವರೆಗೂ ಉಳಿದೆವು.
. ಚಿಕಿತ್ಸೆಗೆಂದು ಅವರು ಲಂಡನ್ ದಲ್ಲಿದ್ದರು.ಅವರ ಮಗಳು ಮಮತಾಳ ಮೊಬೈಲ್ ಗೆ ಕರೆ ಮಾಡಿದೆ.ಮಾತನಾಡಿದರು ಹೆಗಡೆ. ” ಅಶೋಕ್, ಬೆಂಗಳೂರಿಗೆ ಮರಳುತ್ತೇನೆ.ಹೆಲಿಕಾಪ್ಟರ್ ನಲ್ಲಿ ರಾಜ್ಯ ಸುತ್ತಿ ಪಕ್ಷ ಕಟ್ಟೋಣ.” ” ಆಗ್ಲಿ ಸಾರ್. ಮೊದಲು ನೀವು ಆರೋಗ್ಯವಂತರಾಗಿ ಹಿಂತುರಗಿ” ಎಂದಿದ್ದೆ.
ಅವರು ನಿಧನ ಹೊಂದುವ ಒಂದೆರಡು ತಿಂಗಳು ಮೊದಲು ಬೆಂಗಳೂರಿನ ಸದಾಶಿವನಗರದ ಕೃತಿಕಾ ನಿವಾಸಕ್ಕೆ ಹೋದೆ.ಆಪ್ತ ಸಹಾಯಕ ನಾಗರಾಜ ಮೊದಲ ಮಹಡಿಯ ಹೆಗಡೆಯವರ ಕೋಣೆಗೆ ಹೋಗಿ ನಾನು ಬಂದ ವಿಷಯ ತಿಳಿಸಿದರು.ಕೆಳಗೆ ನೂರು ಜನರು ಕುಳಿತಿದ್ದರು.ನಾನು ಹೂವಿನ ಬುಕ್ಕೆ ತೆಗೆದುಕೊಂಡು ಅವರ ಬಳಿ ಹೋದೆ.ಅವರು ಸೊರಗಿ ಹೋಗಿದ್ದರು.ನಾನು ಮಂಡೆಯೂರಿ ಅವರ ಮುಖದ ಸಮೀಪ ಸಣ್ಣದಾಗಿ ಮಾತನಾಡಿದೆ.ಅವರು ಗದ್ಗದಿತರಾದರು.” ನೀವು ಈಗ ಈ ಬುಕ್ಕೆ ತರಬಾರದಿತ್ತು” ಎಂದರು.ನನ್ನ ಕಣ್ಣೀರನ್ನು ಗಟ್ಟಿ ಮನಸ್ಸು ಮಾಡಿ ತಡೆದುಕೊಂಡೆ.ಸಾರ್ ನೀವು ಸುಧಾರಿಸಿಯೇ ಹೊರಬರುತ್ತೀರಿ ಎಂದೆ.ನನ್ನ ಜೊತೆಗಿದ್ದ ಏಳೆಂಟು ಮಿತ್ರ ಕೈಮುಗಿದುಕೊಂಡು ಸಾಲಾಗಿ ನಿಂತಿದ್ದರು.ಅವರನ್ನು ಹೆಗಡೆಯವರಿಗೆ ಪರಿಚಯಿಸಿದೆ.ಅಷ್ಟರಲ್ಲಿ ಅವರ ಪತ್ನಿ ಶಕುಂತಲಾ ಒಳಬಂದು” ನೀವು ಅಶೋಕ್ ಜೊತೆ ಬರೀ ಮಾತಾಡ್ತೀರೊ ಹೊಟ್ಟೆಗೆ ಏನಾದರೂ ಹಾಕ್ತೀರೊ” ಎಂದರು.ನಾನು ಹೆಗಡೆಯವರಿಗೆ ಕೈಮುಗಿದು ಭಾರವಾದ ಹೃದಯದಿಂದ ಹೊರಗೆ ಬಂದೆ.
2004 ರ ಜನೇವರಿ 12 ರಂದು ಬೆಂಗಳೂರಿಗೆ ಯಾವದೋ ಕೆಲಸಕ್ಕಾಗಿ ಹೋಗಲು ಟಿಕೆಟ್ ಬುಕ್ ಮಾಡಿಸಿದ್ದೆ.ಮಧ್ಯಾನ್ಹ 1 ಗಂಟೆಗೆ ಹೆಗಡೆಯವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು.ರಾತ್ರಿಯೇ ಹೋದೆ.ಮರುದಿನ ಅದೇ ಕೃತಿಕಾ ಹೊರಗಿನ ಬಯಲಿನಲ್ಲಿ ಹಾಕಿದ್ದ ಶಾಮಿಯಾನಾದಡಿ ಹೆಗಡೆಯವರು ಚಿರನಿದ್ರೆಯಲ್ಲಿದ್ದರು.!( ನನ್ನ ಬೆಳಗಾವಿಯ ಬಿಜಿನೆಸ್ ಕಚೇರಿಯ
ಗೋಡೆಗೆ ಹೆಗಡೆಯವರ ಭಾವಚಿತ್ರಕ್ಕೆ ಗಂಧದ ಹೂಹಾರ ಇದ್ದೇ ಇರುತ್ತದೆ.ಜೊತೆಗೆ ಜನ್ಮದಿನದಂದು ಹೂವಿನ ಹಾರ)
✒️ಅಶೋಕ ಚಂದರಗಿ