ಗೋಕಾಕ: ಪ್ರಜ್ವಲ್ ರೇವಣ್ಣ ಅವರಂತೆಯೇ ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರ ವೀಡಿಯೊಗಳೂ ಹೊರಬರಬಹುದು,. ಹೀಗಾಗಿ ಈ ಮಹಾನಾಯಕನನ್ನು ತಡೆಯಿರಿ ಎಂದು ಹೇಳುತ್ತಿದ್ದೇನೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಮಂಗಳವಾರ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಖಾಸಗಿ ವಿಡಿಯೊಗಳು ಹೊರಗೆ ಬಂದಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೆ. ಮಹಾನಾಯಕನೊಬ್ಬ ಪ್ರತಿಷ್ಠಿತ ಕುಟುಂಬಕ್ಕೆ ಖೆಡ್ಡಾ ತೋಡುತ್ತಿದ್ದಾನೆ ಎಂದು ಹೇಳಿದಾಗ ಯಾರೂ ನನ್ನ ಮಾತು ನಂಬಿರಲಿಲ್ಲ. ಈಗ ಏನಾಯ್ತು ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಈಗ ಸೈದ್ಧಾಂತಿಕ ಹೋರಾಟ ಮುಗಿದು ಹೋಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ತುಳಿಯುವುದೇ ಈಗಿನ ರಾಜಕಾರಣವಾಗಿದೆ. ಸಿ.ಡಿ, ಪೆನ್‌ಡ್ರೈವ್ ಪ್ರಕರಣಗಳು ಒಳ್ಳೆಯದಲ್ಲ. ಇದನ್ನು ಪಕ್ಷಾತೀತವಾಗಿ ಇಲ್ಲಿಗೆ ಮುಗಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ ಅವರ ಸಿ.ಡಿಗಳು ಹೊರಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಆಚೆ ಬಂದಿದ್ದರ ಹಿಂದೆ ನಾನು ಮೊದಲ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದಿದ್ದೆ. ನನ್ನ ಮಾತನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ವಕೀಲ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಏನು ಹೇಳುತ್ತದೆ ಎಂದು ಪ್ರಶ್ನಿಸಿದ ಅವರು. ಮುಖ್ಯಮಂತ್ರಿಗಳಿಗೆ ಮುಂದೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವೀಡಿಯೊ ಪ್ರಕರಣಗಳಿಗೆ ಪಕ್ಷಾತೀತವಾಗಿ ಕೊನೆ ಹಾಡಿ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಈಗ ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಕೈವಾಡ ಇದೆ. ಎಲ್ಲ ಸಾಕ್ಷಿ, ದಾಖಲೆಗಳೂ ನನ್ನ ಬಳಿ ಇವೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಆರೋಪಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನ್ನ ಪ್ರಕರಣ ಸಿಬಿಐಗೆ ಕೊಟ್ಟರೆ ಎಲ್ಲ ಸಾಕ್ಷಿ ಒದಗಿಸುತ್ತೇನೆ. ನನ್ನ ಕೇಸಿನಲ್ಲಿ ಶಿವಕುಮಾರ್ ಮಾತ್ರವಲ್ಲ; ನಮ್ಮವರೂ ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ನನಗೆ ಎಸ್.ಐ.ಟಿ ಮೇಲೆ ಆಗಲೂ ವಿಶ್ವಾಸ ಇರಲಿಲ್ಲ, ಈಗಲೂ ಇಲ್ಲ’ ಎಂದರು.