ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ( ಬಿಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಅವಧಿ ಇನ್ನು ಒಂದು ವರ್ಷ ಬಾಕಿಯಿದೆ. ಬ್ಯಾಂಕಿನ ನಿರ್ದೇಶಕರು ಪ್ರತ್ಯೇಕ ಸಭೆ ನಡೆಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ತೀರ್ಮಾನ ಮಾಡಿರಲಿಲ್ಲ. ಆದರೆ, ಬ್ಯಾಂಕಿನ ನಿರ್ದೇಶಕರು, ಹಿರಿಯರಿಗೆ ಗೌರವ ಕೊಟ್ಟು ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದರು.


ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಬ್ಯಾಂಕಿಗೆ ನೂತನ ಅಧ್ಯಕ್ಷರನ್ನುಅವಿರೋಧವಾಗಿ ಆಯ್ಕೆ ಮಾಡಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಹಿರಿಯರಾದ ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ರಮೇಶ ಕತ್ತಿ ಅವರ ನೇತೃತ್ವದಲ್ಲೇ ನೂತನ ಅಧ್ಯಕ್ಷರು ಯಾರಾಗಬೇಕು ಎಂಬುದರ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ರಮೇಶ ಕತ್ತಿ ಅ‍ವರ ಅಧಿಕಾರವಧಿಯಲ್ಲಿ ಕಳೆದ ವರ್ಷ ರಾಜ್ಯದಲ್ಲೇ ಬೆಳಗಾವಿ ಡಿಸಿಸಿ ಬ್ಯಾಂಕ್‌ ನಂಬರ್‌ 1ನೇ ಸ್ಥಾನದಲ್ಲಿದೆ. ₹ 30 ಕೋಟಿ ನಿವ್ವಳ ಲಾಭ ಗಳಿಸಿದೆ. ಕತ್ತಿ ಅವರು ಉತ್ತಮ ಆಡಳಿತವನ್ನೂ ನೀಡಿದ್ದಾರೆ. 2025ರ ನವೆಂಬರ್‌ ತಿಂಗಳಲ್ಲಿ ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಯಲಿದೆ. ಬ್ಯಾಂಕ್‌ ನೌಕರರು, ಗ್ರಾಹಕರು, ರೈತರ ಹಿತದೃಷ್ಟಿಯಿಂದ ಬ್ಯಾಂಕಿನ 17 ನಿರ್ದೇಶಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ರಮೇಶ ಕತ್ತಿ ಕೂಡ ನಮ್ಮ ಜೊತೆಗಿದ್ದಾರೆ. ಗುರುವಾರ ನಡೆದ ನಿರ್ದೇಶಕರ ಸಭೆಗೂ ರಮೇಶ ಕತ್ತಿ ರಾಜೀನಾಮೆ ನೀಡಿದ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿದರು.
ಸದಸ್ಯತ್ವದ ಕುರಿತು ಗೊಂದಲ ಇದೆ. ಸಣ್ಣ ಪುಟ್ಟ ಅಸಮಾಧಾನವಿತ್ತು. ಬೇರೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಮನವಿ ಮೇರೆಗೆ ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. 2015ರಿಂದ 2024ರಅವರಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನದಲ್ಲೇ ಆಡಳಿತ ಮಂಡಳಿ ನಡೆಯಲಿದೆ. ಆಡಳಿತ ಮಂಡಳಿಯ ಸಹಕಾರದೊಂದಿಗೆ ನೂತನ ಅಧ್ಯಕ್ಷರು ಕಡಿಮೆ ಅವಧಿಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಹುದಾಗಿದೆ.
ಡಿಸಿಸಿ ಬ್ಯಾಂಕಿನ ವಿಚಾರದಲ್ಲಿ ಪಕ್ಷ ಇಲ್ಲ. ಬಣ ರಾಜಕೀಯವೂ ಇಲ್ಲ. ಪಕ್ಷಾತೀತವಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಡಿಸಿಸಿ ಬ್ಯಾಂಕಿನ ಬಗ್ಗೆ ಗ್ರಾಹಕರು, ರೈತರಿಗೆ ಅಪಾರ ನಂಬಿಕೆಯಿದೆ. ಬ್ಯಾಂಕಿನ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಸಹಕಾರಿ ಬ್ಯಾಂಕಿನ ಮೂಲಕ ಡಿಸಿಸಿ ಬ್ಯಾಂಕಿನಲ್ಲಿ ₹250 ಕೋಟಿ ಠೇವಣಿ ಇಟ್ಟಿದ್ದಾರೆ. ರಮೇಶ ಕತ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಬ್ಯಾಂಕಿನ ಠೇವಣಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಠೇವಣಿದಾರರು ತಮ್ಮ ಠೇವಣಿ ಹಣ ವಾಪಸ್‌ ಪಡೆಯುವುದಿಲ್ಲ ಎಂದು ಹೇಳಿದರು.
ಜಾರಕಿಹೊಳಿ ಕುಟುಂಬದ ಸದಸ್ಯರ್ಯಾರು ಕೂಡ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ಸಂಜು ಅವ್ವಕ್ಕನವರ, ಕೃಷ್ಣಾ ಅನಗೋಳಕರ, ಶ್ರೀಕಾಂತ ಢವಣ, ಅಪ್ಪಾಸಾಬ ಕುಲಗೋಡ, ಶಿವಾನಂದ ಡೋಣಿ, ರತ್ನಾ ಮಾಮನಿ, ಸತೀಶ ಕಡಾಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.