ಬೆಳಗಾವಿ : ಶಾಲೆಯ ಆವರಣದಲ್ಲಿ ಆಡುತ್ತಿದ್ದ ಎರಡೂವರೆ ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ ಆರೋಪಿಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಜೀವ ಇರುವವರೆಗೂ ಕಠಿಣ ಶಿಕ್ಷೆ ಹಾಗೂ ₹30000 ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. ಬೈಲಹೊಂಗಲ ತಾಲೂಕು ವಣ್ಣೂರು ಗ್ರಾಮದ ಸುಭಾಷ ಮಹಾದೇವ ನಾಯಕ ಶಿಕ್ಷೆಗೊಳಗಾದ ಆರೋಪಿ. 2017ರಲ್ಲಿ ಶಾಲೆಯ ಆವರಣದಲ್ಲಿ ಆಟ ಆಡುತ್ತಿದ್ದ ಬಾಲಕಿಯನ್ನು ಶಾಲೆಯ ಕಂಪೌಂಡ್ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನಂತರ
ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನ ಪಟ್ಟಾಗ ಸಿಕ್ಕಿ ಬಿದ್ದಿದ್ದ. ಈ ಬಗ್ಗೆ ಪೋಷಕರು ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖಾಧಿಕಾರಿ ಎಚ್. ಸಂಗನಗೌಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ
ನ್ಯಾಯಾಧೀಶೆ ಪುಷ್ಪಲತಾ ತೀರ್ಪು ಪ್ರಕಟಿಸಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ಪಡೆಯುವಂತೆ ಬಾಲಕಿಗೆ ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.